ಎದೆ ನೋವಿನಿಂದ ನರಳಿದರೂ ಸಿಗದ ಆಂಬುಲೆನ್ಸ್ | ವಾಡಿ ಬಡವರ ಪ್ರಾಣದೊಂದಿಗೆ ಅಧಿಕಾರಿಗಳ ಚೆಲ್ಲಾಟ ಕ್ರಮಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಎದೆ ನೋವಿನಂತಹ ಜೀವನ್ಮರಣದ ಸ್ಥಿತಿಯಲ್ಲೂ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಸಿಗದ ದಾರುಣ ಸ್ಥಿತಿ ವಾಡಿ ಪಟ್ಟಣದಲ್ಲಿದೆ, ಇಂತಹ ಗಂಭೀರ ವಿಷಯವನ್ನಾದರು ಅರಿತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ, ಸೋನಾಬಾಯಿ ಬಡಾವಣೆಯ ನಿವಾಸಿಯೊಬ್ಬರು ತೀವ್ರ ಎದೆ ನೋವಿನಿಂದ ನರಳುತ್ತಿದ್ದಾಗ 108ಕ್ಕೆ ಕರೆ ಮಾಡಿದರೆ, “ತಾಲೂಕಿನ ಎಲ್ಲಾ ಆಂಬುಲೆನ್ಸ್‌ಗಳು ಬ್ಯುಸಿ ಇವೆ, ಒಂದು ಗಂಟೆ ಕಾಯಿರಿ” ಎಂಬ ನಿರ್ಲಜ್ಜ ಉತ್ತರ ನೀಡಲಾಗಿದೆ. ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ, “108ಗೆ ಕರೆ ಮಾಡಿ, ನಾವೇನು ಮಾಡಲು ಸಾಧ್ಯ, ವಾಡಿ ಅಂಬುಲೆನ್ಸ್ ರಿಪೇರಿಗೆ ಹೋಗಿದ್ದು ಒಂದೆರೆಡು ದಿನ ಕಾಯಬೇಕಾಗುತ್ತೆ ” ಎಂದು ತಮ್ಮ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ ವಾಡಿ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಿತ್ತಾಪುರ ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಆಗ ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದಾಗ, ಆದಷ್ಟು ಬೇಗ ರಿಪೇರಿ ಮಾಡಿಸಿ ರೋಗಿಗಳಿಗೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಎರಡು ತಿಂಗಳ ಬಳಿಕ ಆಸ್ಪತ್ರೆಗೆ ತೆರಳಿ ನೋಡಿದರೆ, ಆಂಬುಲೆನ್ಸ್ ದುರಸ್ತಿಯಾಗದೆ ಆಸ್ಪತ್ರೆಯ ಹಿಂಭಾಗದ ಮೂಲೆಯಲ್ಲಿ ಹಾಳಾಗಿ ಬಿದ್ದಿದೆ. ಸಿಬ್ಬಂದಿಯನ್ನು ಕೇಳಿದರೆ ರಿಪೇರಿಯಾಗದೆ ಹಾಗೆಯೇ ಬಿದ್ದಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜನರ ಪ್ರಾಣ ಉಳಿಸಬೇಕಾದ ವಾಹನವನ್ನು ಮೂಲೆಗುಂಪು ಮಾಡಿ ಆರೋಗ್ಯ ಇಲಾಖೆ ನಿದ್ರೆಗೆ ಜಾರಿದೆ ಎಂದು ಆಪಾದಿಸಿದ್ದಾರೆ.
ಸುಮಾರು 50 ಸಾವಿರ ಜನಸಂಖ್ಯೆ ಇರುವ ವಾಡಿಯಲ್ಲಿ ಕಲ್ಲು ಗಣಿಗಾರಿಕೆ ಮತ್ತು ಎಸಿಸಿ (ACC) ಕಾರ್ಖಾನೆಯ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ದುಡಿಮೆಯನ್ನೇ ನಂಬಿ ಬದುಕುವ ಈ ಬಡ ಕುಟುಂಬಗಳು ಅನಾರೋಗ್ಯಕ್ಕೀಡಾದಾಗ ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸುತ್ತವೆ. ಆದರೆ, ಆಂಬುಲೆನ್ಸ್ ದುರಸ್ತಿ ಮಾಡಿಸದೆ ಅಧಿಕಾರಿಗಳು ಬಡ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಆರೋಗ್ಯ ಸಮುದಾಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಈ ಘೋರ ನಿರ್ಲಕ್ಷ್ಯದಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮೇಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆಂಬುಲೆನ್ಸ್ ಸೇವೆಯನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವೀರಣ್ಣ ಯಾರಿ ಎಚ್ಚರಿಸಿದ್ದಾರೆ.
