ಉದ್ಯಮಿ ವೆಂಕಟೇಶ್ ಕಡೇಚೂರ್ ಗೆ ಕೆಕೆಸಿಸಿಐ ಪ್ರತಿಷ್ಠಿತ ವಾಣಿಜ್ಯೋದ್ಯಮಿ ರತ್ನ ಪ್ರಶಸ್ತಿ, ನ.30 ರಂದು ಪ್ರದಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಹಿರಿಯ ಉದ್ಯಮಿಗಳು ಕಡೆಚೂರು ಗ್ರೂಪ್ ಆಫ್ ಹೋಟೆಲ್ ಮಾಲೀಕರಾದ ವೆಂಕಟೇಶ ಎಂ. ಕಡೇಚೂರ್ ಅವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ ಪ್ರತಿಷ್ಠಿತ ‘ಕೆಕೆಸಿಸಿಐ ವಾಣಿಜ್ಯೋದ್ಯಮಿ ರತ್ನ ಪ್ರಶಸ್ತಿ-2026’ ನ್ನು ವಾಣಿಜ್ಯ ಮತ್ತು ಆತಿಥ್ಯ ಕ್ಷೇತ್ರದ ಅವರ ಸುದೀರ್ಘ ನಿಸ್ವಾರ್ಥ ಸೇವೆ, ಸ್ಫೂರ್ತಿದಾಯಕ ನಾಯಕತ್ವ ಹಾಗೂ ಸಮಾಜಮುಖಿ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಕೆಕೆಸಿಸಿಐ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಈ ಪ್ರಶಸ್ತಿಗೆ ಅವರ ಹೆಸರನ್ನು ಅಂತಿಮಗೊಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನ. 30 ರಂದು ಸಂಜೆ 4 ಗಂಟೆಗೆ ಎಚ್ಕೆಇಎಸ್ ಸಂಸ್ಥೆಯ ಎಂ.ಆರ್.ಎಂ.ಸಿ. ಸ್ಯಾಕ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಗೌರವ ಸ್ವೀಕರಿಸಲು ಆಗಮಿಸುವಂತೆ ಕೆಕೆಸಿಸಿಐ ಅಧ್ಯಕ್ಷರಾದ ಶರಣಬಸಪ್ಪ ಎಂ. ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಹಾಗೂ ಪ್ರಶಸ್ತಿ ಮತ್ತು ಸ್ಮರಣಿಕೆ ಸಮಿತಿಯ ಅಧ್ಯಕ್ಷ ರಾಹುಲ್ ಎಸ್. ತೆಂಗಳಿ ಅವರು ಆಹ್ವಾನ ಪತ್ರದ ಮೂಲಕ ಆತ್ಮೀಯವಾಗಿ ಕೋರಿದ್ದಾರೆ.
ವೆಂಕಟೇಶ ಎಂ. ಕಡೇಚೂರ್ ಅವರ ಸಾಧನೆಯ ಪಯಣವು ಯುವ ಉದ್ಯಮಿಗಳಿಗೆ ಹಾಗೂ ಸಂಸ್ಥೆಯ ಸದಸ್ಯರಿಗೆ ಸ್ಫೂರ್ತಿದಾಯಕ ಎಂದು ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ ಮತ್ತು ಸಮಿತಿ ಪದಾಧಿಕಾರಿಗಳು ಶುಭ ಕೋರಿ ಅಭಿನಂದನೆ ತಿಳಿಸಿದ್ದಾರೆ.
ವೆಂಕಟೇಶ್ ಕಡೇಚೂರ್ ಹೋಟೆಲ್ ರಿಯಲ್ ಎಸ್ಟೇಟ್, ಹಣಕಾಸು, ಅಬಕಾರಿ ಕ್ಷೇತ್ರದಲ್ಲಿ ಕಳೆದ 46 ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಉದ್ಯಮಿಗಳ ಸರ್ವತೋಮುಖ ಬೆಳವಣಿಗೆಗಾಗಿ ಕಾಯಾ ವಾಚಾ ಮನಸಾ ದುಡಿದವರು.ಕಲ್ಯಾಣ ಕರ್ನಾಟಕ ಭಾಗದ ಉದ್ಯಮ ಲೋಕದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಇವರು ದಿ.ಮಹಾದೇವಪ್ಪ ಕಡೇಚೂರ್ ಮತ್ತು ದಿ.ಬಾಲಮ್ಮ ಮಹಾದೇವಪ್ಪ ಅವರ ಸುಪುತ್ರ. ಶ್ರೀಮತಿ ವಾಣಿಶ್ರೀ ಧರ್ಮಪತ್ನಿ, ಅನೀಶ್, ಅಲ್ಪನಾ, ಅಸ್ಮಿತಾ ಮಕ್ಕಳು. ಇವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆ ದವರು. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಸುರಪುರ ರಂಗಂಪೇಟೆ ಶಾಲೆಯಲ್ಲಿ ಶಿಕ್ಷಣ, 5 ತರಗತಿಯಿಂದ 10ನೇ ತರಗತಿಯವರೆಗೆ ವಿಜಯ ವಿದ್ಯಾಲಯ ಕಲಬುರಗಿ ಹಾಗೂ ಸುರಪುರ ಪದವಿಪೂರ್ವ ಶಿಕ್ಷಣ ಪ್ರಭು ಕಾಲೇಜಿನಲ್ಲಿ ಶಿಕ್ಷಣ ಪಡೆದರು. 46 ವರ್ಷಗಳಿಂದ ಹೋಟೆಲ್, ವಸತಿ ಮತ್ತು ಅಬಕಾರಿ ಕ್ಷೇತ್ರದಲ್ಲಿ ಅನುಭವಸ್ಥರು.
ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ನ ವ್ಯವಸ್ಥಾಪಕ ನಿರ್ದೇಶಕರು, ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್ ನ ಪಾಲುದಾರರು, ಹೋಟೆಲ್ ಆಮಂತ್ರಣ ಸಸ್ಯಹಾರಿ ಹೋಟೆಲ್, ವಿಂಟೇಜ್ ಪಾರ್ಕ್, ಗಾಂಧಿನಗರ ಬೆಂಗಳೂರು, ಆಶ್ರಯ ಡೀಲಕ್ಸ್, ಆಶ್ರಯ ಕಂಫರ್ಟ್ಸ್ ಅನಂತ ರೆಸಿಡೆನ್ಸಿ ಕಲಬುರಗಿ, ಅನ್ ಮೋಲ್ ರೆಸಿಡೆನ್ಸಿ, ಯಾದಗಿರಿ, ಕಡೇಚೂರ್ ಸೆಂಟ್ರಲ್ ಸುರಪುರ, ನಕ್ಷತ್ರ ಡೆವಲಪರ್ಸ್ ಕಲಬುರಗಿ, ಹೋಟೆಲ್ ಬೃಂದಾವನ ಗ್ರ್ಯಾಂಡ್ ಕಲಬುರಗಿ, ಬ್ಲೂ ನೈಲ್ ಬರ್ತೀನಿ ಅಂಡ್ ರೆಸ್ಟೋರೆಂಟ್, ಕಡೇಚೂರ್ ವೈನ್ಸ್ ಕಲಬುರಗಿ, ಪಂಚಮಿ ಮಂಗಳ ಕಲ್ಯಾಣ ಮಂಟಪ ಸುರಪುರ, ವಿಜಯಲಕ್ಷ್ಮಿ ಫೈನಾನ್ಸ್, ಅಲ್ಪನಾ ಪ್ರಕಾಶನ ಸಂಸ್ಥೆ ಮೂಲಕ ಕೃತಿಗಳ ಪ್ರಕಟಣೆ ಶ್ರೀ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್, ಕಡೇಚೂರ್ ಗ್ರೂಪ್ ಆಫ್ ಹೋಟೆಲ್ಸ್ ನ ವ್ಯವಸ್ಥಾಪಕ ನಿರ್ದೇಶಕರು ಕೂಡ. ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್ ನ ಪಾಲುದಾರರು ಕೂಡ ಆಗಿದ್ದಾರೆ.
ಅಲ್ಪನಾ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಪುಸ್ತಕಗಳ ಬಿಡುಗಡೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಶ್ರೀ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಪ್ರತಿ ತಿಂಗಳು ಶಾಲಾ ಗ್ರಂಥಾಲಯಕ್ಕೆ ದಿ. ಮಹಾದೇವಪ್ಪ ಕಡೇಚೂರ್ ಬರೆದ ಕೃತಿಗಳ ಹಸ್ತಾಂತರ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಗೋಶಾಲೆ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳಿಗೆ ಹಾಗೂ ದಾನಗಳನ್ನು ನೀಡಿ ಜನಪ್ರಿಯರಾಗಿದ್ದಾರೆ.

