ಚಿತ್ತಾಪುರ ಬಸವ ಭವನ, ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ | ಕಾಯಕ ಮತ್ತು ದಾಸೋಹದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಬಸವಣ್ಣನವರ ತತ್ವಗಳು ಕೇವಲ ಶಾಲಾ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ನಮ್ಮ ನಿತ್ಯದ ಬದುಕು ಮತ್ತು ಕಾರ್ಯಗಳಲ್ಲಿ ಪ್ರತಿಫಲಿಸಬೇಕು. ಅವರ ಕಾಯಕ ಮತ್ತು ದಾಸೋಹದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ರಾವೂರ ರಸ್ತೆಯಲ್ಲಿ ಶ್ರೀ ಬಸವೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಸವ ತತ್ವಗಳ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ಮತ್ತು ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಾನು ಬಸವ ವಿರೋಧಿ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸುವುದು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಬಸವಣ್ಣನವರ ವಿಚಾರಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ ನಮ್ಮ ಕೆಲಸಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರಿದ್ದಾರೆ. ಆದರೆ ಬಸವ ಜಯಂತಿಯಂದು ರಜೆ ತೆಗೆದುಕೊಂಡು ಆಚರಣೆ ಮಾಡಿದರೆ ಅವರ ಕಾಯಕದ ಸಂದೇಶವನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ? ಮಹನೀಯರ ಜಯಂತಿಗಳಂದು ರಜೆ ಪಡೆಯುವುದಕ್ಕಿಂತ ಅವರ ತತ್ವಗಳಿಂದ ಪ್ರೇರಣೆ ಪಡೆದು ಕೆಲಸ ಮಾಡುವುದು ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣನವರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಯಕ ಮತ್ತು ದಾಸೋಹ ಬಸವಣ್ಣನವರ ಪ್ರಮುಖ ತತ್ವಗಳಾಗಿವೆ. ಬಸವಣ್ಣನವರು ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಸಂಪನ್ಮೂಲವನ್ನು ಬಡವರ ಕಲ್ಯಾಣಕ್ಕಾಗಿ ಬಳಸುವ ಆಶಯ ಹೊಂದಿದ್ದರು. ಅದೇ ರೀತಿಯಲ್ಲಿ ಸರ್ಕಾರವೂ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಬಲ ನೀಡುವಂತಹ ನೀತಿಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

12 ವರ್ಷಗಳ ಹಿಂದೆ ಚಿತ್ತಾಪುರ ಹೇಗಿತ್ತು, ಈಗ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಜನರು ಗಮನಿಸಬೇಕು. ಹಿಂದೆ ಕಲಬುರಗಿಯಿಂದ ಚಿತ್ತಾಪುರಕ್ಕೆ ಬರಲು ಮೂರು ಗಂಟೆ ಬೇಕಾಗುತ್ತಿತ್ತು. ಇಂದು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸೈನ್ಸ್ ಸೆಂಟರ್ ನಿರ್ಮಿಸಲಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕನ್ಯಾ ವಿದ್ಯಾರ್ಥಿನಿಯರ ಶಾಲೆಯನ್ನೂ ನಿರ್ಮಿಸಲಾಗಿದೆ. ಜನರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿರುವುದು ಕಾಯಕ ಮಾಡಲು. ಹೀಗಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ನಿರೀಕ್ಷೆಗಳಿಗೆ ಸ್ಪಂದಿಸುತ್ತಿದ್ದೇನೆ. ಚಿತ್ತಾಪುರದ ಜನರು ಕೆಲವೊಮ್ಮೆ ಕಟುವಾಗಿ ಮಾತನಾಡಿದರೂ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಬಸವಣ್ಣನವರ ತತ್ವಗಳಲ್ಲಿ ಸ್ವಾಭಿಮಾನದ ಬದುಕಿನ ಸಂದೇಶವಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಬಸವಣ್ಣನವರ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಖಂಡಿಸಿ ಕಲಬುರಗಿಯ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಅವರನ್ನು ಪಠ್ಯಪುಸ್ತಕ ಸಮಿತಿಯಿಂದ ಕೈಬಿಡಲಾಯಿತು ಎಂದು ಸ್ಮರಿಸಿದರು.

ಬಸವ ತತ್ವವು ಜನರಿಂದ, ಜನರಿಗಾಗಿ ರೂಪುಗೊಂಡ ಸಮಾನತೆಯ ಬದುಕಿನ ಮಾರ್ಗವಾಗಿದೆ. ನಮ್ಮ ಮನೆಯಲ್ಲಿಯೂ ತಾಯಿ ಮತ್ತು ಮಕ್ಕಳು ವಿಭೂತಿ ಧರಿಸುತ್ತಾರೆ. ಬಸವಣ್ಣನವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಬಸವಣ್ಣನವರ ಹೆಸರಿನಲ್ಲಿ ತಪ್ಪು ಮಾಹಿತಿ ಹರಡುವ ಹಾಗೂ ಇತಿಹಾಸವನ್ನು ತಿರುಚುವ ಪ್ರಯತ್ನಗಳಿಂದ ಜನರು ದೂರವಿರಬೇಕು ಎಂದರು.

ಬಸವ ಮಂಟಪದ ರವಿ ಹಂಜ್ ಅವರು ಬಸವಣ್ಣನವರ ಕುರಿತು ಬರೆದಿರುವ ಪುಸ್ತಕದಲ್ಲಿನ ಕೆಲವು ವಿಚಾರಗಳು ಆಕ್ಷೇಪಾರ್ಹವಾಗಿವೆ. ಬಸವಣ್ಣನವರ ಇತಿಹಾಸದ ಕುರಿತು ತಪ್ಪು ನಿರೂಪಣೆ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ಕ್ರಮದ ಅಗತ್ಯವಿದೆ. ಈ ವಿಚಾರದಲ್ಲಿ ಈ ವ್ಯಕ್ತಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಅನುಭವ ಮಂಟಪದ ಕಾರ್ಯದ ನಂತರ ಕಲಬುರಗಿ ನಗರದಲ್ಲಿ ಸುಮಾರು ₹50ರಿಂದ ₹60 ಕೋಟಿ ವೆಚ್ಚದಲ್ಲಿ ವಚನ ಮಂಟಪ ಸ್ಥಾಪಿಸುವ ಉದ್ದೇಶವಿದೆ. ಬಸವಣ್ಣನವರ ವಚನಗಳು ಮತ್ತು ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲಾಗುವುದು. ಬಸವ ತತ್ವದ ಬೆಳಕು ಇಡೀ ಚಿತ್ತಾಪುರದಲ್ಲಿ ಹರಡಲಿ ಎಂದು ಆಶಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಏಕತೆ ಮತ್ತು ಸಮಾನತೆ ಸ್ಥಾಪಿಸಲು ಅವರು ಮಹಾನ್ ಕ್ರಾಂತಿಯನ್ನೇ ಮಾಡಿದ್ದರು. ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆ ಹಾಗೂ ಸಮಾನತೆಯಿಂದ ಬದುಕುವ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಚೇತನ ಬಸವಣ್ಣನವರು ಎಂದು ಬಣ್ಣಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅವರು ಮಾತನಾಡಿದರು.

ವಿವಿಧ ಮಠಾಧೀಶರಾದ ಶಿವಶಂಕರ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು, ಸಿದ್ಧವೀರ ಶಿವಾಚಾರ್ಯರು, ಮುನೀಂದ್ರ ಶಿವಾಚಾರ್ಯರು, ರಾಜಶೇಖರ ಶಿವಾಚಾರ್ಯರು, ಪರಮೇಶ್ವರ ಶಿವಾಚಾರ್ಯರು, ಸಂಗಮನಾಥ ದೇವರು, ಸಿದ್ಧಲಿಂಗ ಮಹಾಸ್ವಾಮಿಗಳು, ಮಲ್ಲಯ್ಯ ಸ್ವಾಮಿಗಳು, ಚೆನ್ನಬಸವ ಶರಣರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ತೊಗರಿ ಮಂಡಳಿ ಅಧ್ಯಕ್ಷ ಸೈಯದ್ ಮಹೇಮೂದ್ ಸಾಹೇಬ್, ಪ್ರಮುಖರಾದ ಶಿವಾನಂದ ಪಾಟೀಲ ಮರತೂರ, ಚಂದ್ರಶೇಖರ ಸಾತನೂರ, ಅಣ್ಣಾರಾವ ಪಾಟೀಲ ಮುಡಬೂಳ, ಡಾ. ಪ್ರಭುರಾಜ ಕಾಂತಾ, ಪ್ರಭುದೇವ ಬೊಮ್ಮನಳ್ಳಿ, ಶರಣು ಸಜ್ಜನಶೆಟ್ಟಿ, ಅನಿಲ ವಡ್ಡಡಗಿ, ಚಂದ್ರಕಾಂತ ಪಾಟೀಲ, ಅಶೋಕ ನಿಪ್ಪಾಣಿ, ಶಾಂತಕುಮಾರ ಹತ್ತಿ, ಶಿವರೆಡ್ಡಿಗೌಡ ಪಾಲಪ, ಎಸ್.ಎನ್.ಪಾಟೀಲ, ಬಸವರಾಜ ಪಾಟೀಲ ಹೇರೂರ, ಬಸವರಾಜ ಶಿವಗೋಳ, ಭಾಗಣ್ಣಗೌಡ ಸಂಕನೂರ, ಭೀಮಣ್ಣ ಸಾಲಿ, ಸಿದ್ದುಗೌಡ ಅಫಜಲಪುರಕರ್, ವೀರುಪಾಕ್ಷಪ್ಪ ಗಡ್ಡದ, ಪ್ರಕಾಶ ಹಂಚನಾಳ, ಮಲರೆಡ್ಡಿ ಗೋಪಸೇನ, ಮಲ್ಲಣ್ಣ ಬೊಮ್ಮನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗರಾಜ ಭಂಕಲಗಿ ಸ್ವಾಗತಿಸಿದರು, ವಿಶ್ವಾರಾಧ್ಯ ಪಾಟೀಲ ಕರದಾಳ ನಿರೂಪಿಸಿದರು, ವಿರೇಶ್ ಮಾಕಪ್ ವಂದಿಸಿದರು.

ಸಚಿವರಿಗೆ ಅದ್ದೂರಿ ಸ್ವಾಗತ: ಗೃಹ, ಐಟಿಬಿಟಿ ಮತ್ತು ಇ-ಅಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಚಿತ್ತಾಪುರ ಕ್ಷೇತ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಆಗಮಿಸುತ್ತಿದ್ದಂತೆ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಕಾಂಗ್ರೆಸ್ ಮುಖಂಡರಿಂದ, ಕಾರ್ಯಕರ್ತರಿಂದ ಹಾಗೂ ಅಭಿಮಾನಿಗಳಿಂದ ಅದ್ದೂರಿಯಾಗಿ ಸ್ವಾಗತಿಸಿ ಹೂವಿನ ಸುರಿಮಳೆಯೇ ಹರಿಸಿದರು. ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!