ಕಲಬುರಗಿಯ ಶ್ರೀ ಕೋರಿಸಿದ್ಧೇಶ್ವರ ಶಾಖಾ ಮಠಕ್ಕೆ ಶಿವರಾತ್ರಿ ದೇಶಿಕೇಂದ್ರ ಶ್ರೀ ಭೇಟಿ | ಹೃದಯ ಶ್ರೀಮಂತಿಕೆಯೇ ನಾಲವಾರ ಶ್ರೀಮಠದ ನಿಜವಾದ ಸಂಪತ್ತು: ಸುತ್ತೂರು ಶ್ರೀಗಳು
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಆರ್ಥಿಕ ಸಂಪತ್ತಿನಿಂದ ಮಠಗಳ ಶ್ರೇಷ್ಠತೆ ಅಳೆಯಲು ಸಾಧ್ಯವಿಲ್ಲ, ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿರುವುದೇ ನಿಜವಾದ ಶ್ರೀಮಂತಿಕೆ ಆ ನಿಟ್ಟಿನಲ್ಲಿ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಲಕ್ಷಾಂತರ ಭಕ್ತರ ಹೃದಯ ಶ್ರೀಮಂತಿಕೆಯಿಂದ ಆಧ್ಯಾತ್ಮಿಕ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಸುತ್ತೂರು ವೀರಸಿಂಹಾಸನ ಪೀಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಗರದ ಕರುಣೇಶ್ವರ ನಗರದಲ್ಲಿರುವ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಶಾಖಾ ಮಠಕ್ಕೆ ಭೇಟಿ ನೀಡಿ, ಶ್ರೀಮಠದ ವತಿಯಿಂದ ಸಲ್ಲಿಸಿದ ಸತ್ಕಾರ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಸದ್ಗುರು ಶ್ರೀ ಕೋರಿಸಿದ್ಧೇಶ್ವರರು ಹೆಗಲ ಮೇಲಿನ ಕಂಬಳಿಯನ್ನು ನದಿಯ ಮೇಲೆ ಹಾಸಿ ದಾಟಿದ ಪವಾಡಪುರುಷರು, ನಾಲವಾರ ಶ್ರೀಮಠ ಅತ್ಯಂತ ಜಾಗೃತ ಕ್ಷೇತ್ರ, ದಕ್ಷಿಣದಲ್ಲಿ ಮಲೆಮಹದೇಶ್ವರರು ಹೇಗೋ, ಉತ್ತರದಲ್ಲಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರರು ಹಾಗೆ ಲಕ್ಷಾಂತರ ಭಕ್ತರ ಮನೆ-ಮನಸ್ಸುಗಳನ್ನು ಬೆಳಗಿದ ತೇಜೋಮೂರ್ತಿಗಳು ಎಂದು ಸುತ್ತೂರು ಶ್ರೀಗಳು ಸ್ಮರಿಸಿದರು.
ಕರುಣೇಶ್ವರ ನಗರದಲ್ಲಿ ಶಾಖಾ ಮಠ ನಿರ್ಮಾಣವಾಗಿರುವುದು ಕಲಬುರಗಿ ಜನತೆಯ ಭಾಗ್ಯ. ಕರುಣೆಯ ಸಾಗರವಾಗಿದ್ದ ಸದ್ಗುರುಗಳು ಈ ಬಡಾವಣೆಯಲ್ಲಿ ನೆಲೆಸಿ, ಇಡೀ ನಗರವನ್ನು ತಮ್ಮ ಕೃಪಾದೃಷ್ಟಿಯಿಂದ ಬೆಳಗಲಿ ಎಂದು ಅವರು ಹಾರೈಸಿದರು.
ನಾಲವಾರದ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಹಲವು ದಶಕಗಳಿಂದ ಬಲ್ಲೆವು. ಅನೇಕ ಮಠಾಧಿಪತಿಗಳು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಗಳಿಗೆ ಸೀಮಿತವಾಗಿರುತ್ತಾರೆ. ಆದರೆ ನಾಲವಾರ ಶ್ರೀಗಳು ಆಧ್ಯಾತ್ಮಿಕ ಪಾಂಡಿತ್ಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಪ್ರೌಢಿಮೆ ಮೆರೆದಿರುವುದು ವಿಶೇಷ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಹಸಾನ್ನಿಧ್ಯ ವಹಿಸಿದ್ದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠಾಧೀಶರ ಪರಂಪರೆಯಲ್ಲಿ ಸಾರ್ವಭೌಮರೆಂದು ಗೌರವಿಸಲ್ಪಡುವ ಸುತ್ತೂರು ಮಹಾಸನ್ನಿಧಿಯವರು ಮೂಲಮಠವಾದ ನಾಲವಾರಕ್ಕೆ ಹೋಗುವ ಮುನ್ನ ಕರುಣೇಶ್ವರ ನಗರದ ಶಾಖಾಮಠಕ್ಕೆ ಮೊದಲು ಆಗಮಿಸಿದ್ದು ಕಲಬುರಗಿ ಜನತೆಯ ಭಾಗ್ಯ ಎಂದರು.
ಸುತ್ತೂರು ಸಂಸ್ಥಾನವು ಭವ್ಯ ಇತಿಹಾಸ ಹೊಂದಿದ್ದು, ಶಾಂತಿ-ಸಹಬಾಳ್ವೆಯ ಸಂದೇಶ ಸಾರಿದ ಪರಂಪರೆ. ಬುದ್ಧನ ತತ್ವಗಳಿಂದ ಪ್ರೇರಿತರಾಗಿ ಅಶೋಕ ಚಕ್ರವರ್ತಿ ಯುದ್ಧ ತೊರೆದಂತೆ, ತಲಕಾಡಿನ ಗಂಗರು-ಚೋಳರು ಯುದ್ಧನಿರತರಾದಾಗ ಸುತ್ತೂರು ಪೀಠದ ಜಗದ್ಗುರುಗಳು ಶಾಂತಿ ಮಾರ್ಗದ ಪ್ರೇರಣೆ ನೀಡಿದ್ದರು ಎಂದು ಅವರು ಸ್ಮರಿಸಿದರು.
ತ್ರಿವಿಧ ದಾಸೋಹದ ಮೂಲಕ ದೇಶ-ವಿದೇಶಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶೈಕ್ಷಣಿಕ-ಸಾಮಾಜಿಕ-ಆಧ್ಯಾ ತ್ಮಿಕ ಲೋಕದಲ್ಲಿ ಧ್ರುವತಾರೆಯಂತೆ ಬೆಳಗುತ್ತಿರುವ ಸುತ್ತೂರು ಶ್ರೀಗಳು, ಫೆಬ್ರುವರಿಯಲ್ಲಿ ನಡೆಯುವ ನಾಲವಾರ ಶ್ರೀಮಠದ ಜಾತ್ರಾ ಮಹೋತ್ಸವಕ್ಕೂ ಆಗಮಿಸಿ ಲಕ್ಷಾಂತರ ಭಕ್ತರನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಶ್ರೀಶೈಲ ಸಾರಂಗಧರ ಸಂಸ್ಥಾನದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ವಿರೂಪಾಕ್ಷ ರೆಡ್ಡಿ ಇಟಗಿ, ಚನ್ನಬಸಪ್ಪ ಬಿರಾದಾರ್, ಸಿದ್ದನಗೌಡ ಮಾರಡಗಿ, ಉಮಾರೆಡ್ಡಿ ಗೌಡ ಭಾಸರೆಡ್ಡಿ, ವಿಶ್ವನಾಥ್ ರೆಡ್ಡಿ ಗೌಡ ಸೂಗೂರು, ಶರಣಗೌಡ ತುನ್ನೂರ್, ಗುರುಬಸಣ್ಣಗೌಡ ಬಿರಾಳ, ಶಂಕರಲಿಂಗ ಬೋಳಶೆಟ್ಟಿ, ಸಂತೋಷ್ ಪಡಶೆಟ್ಟಿ, ವೆಂಕಟರೆಡ್ಡಿ ಗೌಡ ಸಂಕನೂರ್, ಡಾ. ಪ್ರಕಾಶ್ ಹಿರೇಮಠ್, ಖ್ಯಾತ ಉದ್ಯಮಿ ಮಹಾಜನ್, ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಸೇರಿದಂತೆ ನಗರದ ಅನೇಕ ಗಣ್ಯರು, ಸಾವಿರಾರು ಸದ್ಭಕ್ತರು ಭಾಗವಹಿಸಿದ್ದರು.
