Oplus_0

ಚಿತ್ತಾಪುರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ 

ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ: ಕಾಳಗಿ ಸ್ವಷ್ಟನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕಳೆದ ಅ.25 ರಂದು ನಡೆದ ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಸ್ವಷ್ಟನೆ ನೀಡಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಧಾಕೃಷ್ಣ ದೊಡ್ಡಮನಿ ಅವರು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸಿದ್ದ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ಮಹಿಳೆಯರಿಗೆ ದುಡ್ಡು ಕೊಟ್ಟಿದ್ದು ಸತ್ಯ, ವಿನಾಕಾರಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವುದು ಸರಿಯಲ್ಲ. ಮಣಿಕಂಠ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಸರ್ಕಾರದ 63 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಅಭಿನಂದನಾ ಸಮಾರಂಭ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಮೊದಲು ಇದನ್ನು ಅರಿತುಕೊಂಡು ಆರೋಪ ಮಾಡಲಿ ಎಂದು ಕಿಡಿ ಕಾರಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮಾತನಾಡುವಾಗ ಸ್ವಲ್ಪ ನಾಲಿಗೆ ಹಿಡಿತದಲ್ಲಿರಲಿ, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ, ಸಚಿವರ ವಿರುದ್ಧ ಮಾತನಾಡುವ ನೀನು ಚಿತ್ತಾಪುರಕ್ಕೆ ನಿನ್ನ ಕೊಡುಗೆ ಏನು ಎಂದು ಮಣಿಕಂಠ ರಾಠೋಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಖಾರವಾಗಿ ಪ್ರಶ್ನಿಸಿದರು.

ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ಮಾತನಾಡಿ, ಕೆಲ ದಿನಗಳ ಹಿಂದೆ ಮಣಿಕಂಠ ರಾಠೋಡ ಎನ್ನುವ ಮಾನಸಿಕ ವ್ಯಕ್ತಿ ಚಿತ್ತಾಪುರಕ್ಕೆ ಆಗಮಿಸಿ ಸಚಿವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದೇ ಆತನ ಕೆಲಸವಾಗಿದೆ, ಸಮಾರಂಭದ ನಿಮಿತ್ತ ದೀಪಾವಳಿ ಕಾಣಿಕೆಯಾಗಿ ಮಹಿಳೆಯರಿಗೆ ಹಣ ನೀಡಿದ್ದೇವೆ ಬಿಜೆಪಿಯವರೇನು ಸಾಚಾನ ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಅನ್ನ ಪ್ರಸಾದ, ದೇವಸ್ಥಾನ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಬರೀ ಶೋ ಪುಟ್ಟಪ್ಪ ಮಾಡುವ ಕೆಲಸ ಮಣಿಕಂಠ ಮಾಡಿದ್ದಾನೆ ಎಂದರು.

ಪುರಸಭೆ ಸದಸ್ಯ ವಿನೋದ ಗುತ್ತೇದಾರ ಮಾತನಾಡಿ, ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ತಮ್ಮ ಸ್ವಂತ ಹಣ ನೀಡಿದ್ದೇವೆ ಇದಕ್ಕೆ ನೀವ್ಯಾರು ಕೇಳೋರು ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶಿವಕಾಂತ್ ಬೆಣ್ಣೂರಕರ್, ಮುಖಂಡ ಸುಭಾಷ್ ಜಾಧವ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!