ಮಣಿಕಂಠನ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಸಂಚು
ಕಾಳಗಿ ಸಿಪಿಐ ಪಾಳಾ ವಿರುದ್ಧ ಮಣಿಕಂಠ ರಾಠೋಡ ಸುಳ್ಳು ಆರೋಪ: ಕೋಲಿ ಸಮಾಜ ಖಂಡನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿಯಿಂದ ಮರಳು ಅಕ್ರಮ ಸಾಗಾಟದ ವಿಷಯವಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ಸುಳ್ಳು ಕಥೆ ಹೆಣೆದು ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿ ಕಾಳಗಿ ಸಿಪಿಐ ಜಗದೇವಪ್ಪಾ ಪಾಳಾ ಅವರ ವಿರುದ್ಧ ಮಾಡಿರುವ ಜಾತಿ ನಿಂದನೆಯ ಆರೋಪ ಸತ್ಯಕ್ಕೆ ದೂರವಾಗಿದೆ ಮತ್ತು ಜಾತಿ ದುರ್ಬಳಕೆಯ ಅತ್ಯಂತ ಕೆಟ್ಟ ಕೆಲಸವಾಗಿದೆ ಎಂದು ತಾಲೂಕು ಕೋಲಿ ಸಮಾಜವು ಮಣಿಕಂಠ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ಮುಖಂಡರಾದ ರಾಮಲಿಂಗ ಬಾನರ್, ಹಣಮಂತ ಸಂಕನೂರ, ಶಿವಕುಮಾರ ಯಾಗಾಪೂರ ಅವರು ಹೇಳಿದರು
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಣಿಕಂಠ ಅವರು ತಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಂಜಿನಿಯರ್ ವಾಹನ ತಡೆದಿದ್ದರಿಂದ ಸರ್ಕಾರಿ ಅಧಿಕಾರಿಗೆ ರಕ್ಷಣೆ ನೀಡುವುದು, ಸಮಸ್ಯೆ, ಪರಿಸ್ಥಿತಿ ತಿಳಿಗೊಳಸಲು ಕ್ರಮ ಕೈಗೊಳ್ಳುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಸ್ಥಳಕ್ಕೆ ಅಗಮಿಸಿದ ಪೊಲೀಸ್ ಅಧಿಕಾರಿ ಸೌಜನ್ಯವಾಗಿಯೇ ಸರ್ಕಾರಿ ವಾಹನ ಸ್ಥಳದಿಂದ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗಿಲ್ಲ. ವಾಸ್ತವಾಂಶ ಹೀಗಿರುವಾಗಲೂ ಮಣಿಕಂಠ ಅವರು ತಮ್ಮ ರಾಜಕೀಯ ತೆವಲಿಗೆ ತನ್ನ ಜಾತಿಯನ್ನು ದುರ್ಬಳಕೆ ಮಾಡಿಕೊಂಡು ಹಿಂದುಳಿದ ವರ್ಗದ ಪೊಲೀಸ್ ಅಧಿಕಾರಿ ವಿರುದ್ಧ ಜಾತಿ ನಿಂದನೆಯ ಸುಳ್ಳು ಆರೋಪ ಮಾಡಿದ್ದು ಕೋಲಿ ಸಮಾಜವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದರು.
ಪೊಲೀಸ್ ಇಲಾಖೆಯಲ್ಲಿ ತಮ್ಮ ಪ್ರಾಮಾಣಿಕ ಮತ್ತು ದಕ್ಷತೆಯ ಕೆಲಸದಿಂದ ಉತ್ತಮ ಹೆಸರು ಪಡೆದಿರುವ ಸಿಪಿಐ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಂಚು ಮಾಡಿರುವ ಮಣಿಕಂಠ ಅವರು ಜಾತಿ ನಿಂದನೆ ಆರೋಪದ ಹೇಳಿಕೆ ನೀಡಿದ್ದು ಅವರ ನೀಚ ವ್ಯಕ್ತಿತ್ವಕ್ಕೆ ಕನ್ನಡಿಯಾಗಿದೆ. ಒಂದು ಪಕ್ಷದ ಮುಖಂಡರಾಗಿ ಹೋರಾಟ ಮಾಡುವುದು, ಅನ್ಯಾಯ, ಅಕ್ರಮದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬರಿಗೂ ಹಕ್ಕಿದೆ. ಹಕ್ಕು ಇದೆ ಎಂದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಸರಿಯಾದ ರೀತಿಯಲ್ಲ. ಸುಳ್ಳು ಆರೋಪ ಮಾಡಿ ಅಧಿಕಾರಿಗಳ ಮನೋಸ್ಥೆರ್ಯ ಕುಸಿಯುವಂತೆ ಮಾಡುವುದು, ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ವೈಮನಸ್ಸು ಹೆಚ್ಚಾಗುವಂತೆ ಮಣಿಕಂಠ ಅವರ ಒಳಸಂಚು ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ತನ್ನ ಜಾತಿಯ, ಬೆಂಬಲಿಗರ ಗುಂಪು ಕಟ್ಟಿಕೊಂಡು ಮಣಿಕಂಠ ರಾಠೋಡ ಅವರು ಸಮಾಜದಲ್ಲಿ ಸೃಷ್ಟಿಸುತ್ತಿರುವ ಅಶಾಂತಿಯ ವಾತಾವರಣಕ್ಕೆ ಬಿಜೆಪಿ ವರಿಷ್ಠರು ನಿಯಂತ್ರಣ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಒಬ್ಬ ರಾಜಕಾರಣೆ ಹೇಗಿರಬೇಕು, ಹೇಗೆ ರಾಜಕೀಯ ಮಾಡಬೇಕು, ಸಮಾಜದಲ್ಲಿ, ಆಡಳಿತದಲ್ಲಿ ಸೌರ್ಹಾಧತೆಗೆ ಧಕ್ಕೆಯಾಗದಂತೆ ಹೇಗೆ ಹೋರಾಟ ಮಾಡಬೇಕು ಎಂದು ಮಣಿಕಂಠನಿಗೆ ರಾಜಕೀಯ ಶಿಕ್ಷಣ ನೀಡಬೇಕು. ಮಣಿಕಂಠ ಅವರು ಮಾಡುತ್ತಿರುವ ಕುಕೃತ್ಯಕ್ಕೆ ಮಣೆ ಹಾಕಿ ಮೂಕಪ್ರೇಕ್ಷರಾಗಿ ಕುಳಿತರೆ ಬಿಜೆಪಿ ಪಕ್ಷವೇ ಮಣಿಕಂಠನ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಕುತಂತ್ರ ಮಾಡಿದೆ ಎಂದು ಆರೋಪಿಸಿದರು.
ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ವಿರುದ್ಧ ಜಾತಿ ನಿಂದನೆಯ ಸುಳ್ಳು ಆರೋಪದ ಹೇಳಿಕೆ ಮಣಿಕಂಠ ರಾಠೋಡ ಅವರು ತಕ್ಷಣ ವಾಪಾಸು ಪಡೆಯಬೇಕು. ಬಿಜೆಪಿ ಪಕ್ಷದಲ್ಲಿರುವ ಕೋಲಿ ಸಮಾಜದ ಮುಖಂಡರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಸುಳ್ಳು ಆರೋಪ ಮಾಡಿದ ಮಣಿಕಂಠ ಅವರಿಗೆ ತಕ್ಕ ಪಾಠ ಕಲಿಸಲು ಸ್ವಯಂ ಮುಂದಾಗಬೇಕು. ಇಲ್ಲವಾದರೆ ಕೋಲಿ ಸಮಾಜದಿಂದ ಉಗ್ರ ಹೋರಾಟ ಮಣಿಕಂಠ ಹಾಗೂ ಬಿಜೆಪಿ ಪಕ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಮುಖಂಡರಾದ ಕಾಶಪ್ಪ ಡೋಣಗಾಂವ, ಭೀಮರಾಯ ಹೊತಿನಮಡಿ, ಬಸವರಾಜ ಚಿನ್ನಮಳ್ಳಿ, ಕರಣಕುಮಾರ್ ಅಲ್ಲೂರು, ಸಾಬಣ್ಣ ಭರಾಟೆ, ರಾಜು ಹೊಳಿಕಟ್ಟಿ, ಮಲ್ಲಿಕಾರ್ಜುನ ಸಂಗಾವಿ, ಸಾಬಣ್ಣ ಹೊಳಿಕಟ್ಟಿ, ಶರಣು ಅರಣಕಲ್, ಶಿವಶರಣ ಡೋಣಗಾಂವ, ಸಂಗು ಯರಗಲ್, ದೇವು ದಿಗ್ಗಾಂವ, ಶೇಖರ್ ಆಲೂರ, ಆನಂದ ಯರಗಲ್, ಬಸವರಾಜ ರಾಜೋಳ್ಳಿ, ನಾಗರಾಜ ಮೈನಾಳಕರ್, ದೇವು ಅಲ್ಲೂರ ಸೇರಿದಂತೆ ಇತರರು ಇದ್ದರು.