ನಾಗಾವಿ ಇತಿಹಾಸ ಕುರಿತು ಉತ್ಖನನ ಹಾಗೂ ಸಂಶೋಧನೆ ಆಗಬೇಕಿದೆ: ನಾಗಯ್ಯ ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರಕೂಟರ ಕಾಲದಿಂದ ನಾಗಾವಿ ವಾಸ್ತು ಶಿಲ್ಪ ಕಲೆಗೆ ಹಾಗೂ ಶಿಲಾಶಾಸನಗಳಿಗೆ ಹಾಗೂ ಭವ್ಯ ಪರಂಪರೆಗೆ ಹೆಸರಾಗಿದ್ದು ಈಗ ಅಳಿವಿನ ಅಂಚಿನಲ್ಲಿದೆ ಹೀಗಾಗಿ ಇಲ್ಲಿ ಸಂರಕ್ಷಣೆ ಜೊತೆಗೆ ಉತ್ಖನನ ಹಾಗೂ ಹೆಚ್ಚು ಸಂಶೋಧನೆ ಆಗಬೇಕಾಗಿರುವುದು ಬಹಳ ಅವಶ್ಯಕತೆಯಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ನಾಗಾವಿ ಕ್ಯಾಂಪಸ್ ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗಾವಿ 8 ನೇ ಶತಮಾನದಲ್ಲಿಯೇ ಬಹು ದೊಡ್ಡ ಶಿಕ್ಷಣ ಕೇಂದ್ರವಾಗಿತ್ತು ಎನ್ನುವುದೇ ಹೆಮ್ಮೆ ಪಡುವಂತಹ ವಿಷಯ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಿವಶರಣಪ್ಪ ಬಿರಾದಾರ ನಾಗಾವಿ ಇತಿಹಾಸ ಪರಿಚಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ನಾಗಾವಿ ಧಾರ್ಮಿಕ ಜೊತೆಗೆ ಶೈಕ್ಷಣಿಕ ಕೇಂದ್ರವಾಗಿತ್ತು. ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧವಾದ ವಿದ್ಯಾಕೇಂದ್ರ (ಘಟಿಕಾಸ್ಥಾನ) ನಾಗಾವಿಯಲ್ಲಿದೆ. ಇಲ್ಲಿ ತ್ರೈಪುರೇಶ್ವರ, ಮಧುಸೂದನ, ರಾಮೇಶ್ವರ ಈ ಮೂರು ಶೈಕ್ಷಣಿಕ ಸಂಕಿರಣಗಳಿದ್ದವು ಎಂದರು. ಕರ್ನಾಟಕ ಎನ್ನುವ ಪದ ಮೊಟ್ಟ ಮೊದಲು ನಾಗಾವಿ ಶಾಸನದಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದ ನಳಂದ ವಿಶ್ವವಿದ್ಯಾಲಯ ಎಂದು ನಾಗಾವಿ ವಿಶ್ವವಿದ್ಯಾಲಯಕ್ಕೆ ಕರೆಯಲಾಗಿದೆ. ಶಿಕ್ಷಣ, ಸಾಹಿತ್ಯ ಮತ್ತು ವಿದ್ವತ್ತಿನ ಪ್ರತಿರೂಪವಾದ ನಾಗಾವಿಯಲ್ಲಿಂದು ಮೂಢನಂಬಿಕೆಗಳು ಆಚರಣೆಯಲ್ಲಿ ಇರುವುದು ವಿಷಾದನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ನಾಗಾವಿ ವಿಶ್ವವಿದ್ಯಾಲಯ ಇರುವ ಪರಿಸರದಲ್ಲಿ ನೀವು ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ನೀವೇ ಪುಣ್ಯವಂತರು ಎಂದರು. ಮೊದಲು ನಾವಿರುವ ಪ್ರದೇಶದ ಇತಿಹಾಸ ತಿಳಿದುಕೊಳ್ಳಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸುತ್ತಿರುವ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾಗಾವಿಗೆ ಬಹು ದೊಡ್ಡ ಇತಿಹಾಸವಿದೆ ಆದರೆ ಅದನ್ನು ಸಂರಕ್ಷಿಸದೆ ಇರುವುದರಿಂದ ಇಂದು ನಶಿಸುವ ಹಂತದಲ್ಲಿದೆ ಹೀಗಾಗಿ ನಮ್ಮ ಇತಿಹಾಸವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ. ಬೇರೆ ಪ್ರದೇಶದ ಜನರು ನಮ್ಮ ನಾಗಾವಿ ನಾಡಿಗೆ ಬರುವ ಹಾಗೆ ಮಾಡಬೇಕು ಎಂದರು. ವಿದ್ಯಾರ್ಥಿಗಳನ್ನು ಒಮ್ಮೆ ಸುತ್ತಾಡಿಸಿಕೊಂಡು ನಾಗಾವಿ ಇತಿಹಾಸವನ್ನು ಪರಿಚಯಿಸುವ ಕೆಲಸ ಎಲ್ಲಾ ಶಿಕ್ಷಣ ಸಂಸ್ಥೆಯವರು ಮಾಡಬೇಕು ಎಂದು ಕಿವಿಮಾತು ಹೇಳಿದರು
ಅಧ್ಯಕ್ಷತೆ ವಹಿಸಿದ್ದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಮುಖ್ಯ ಅತಿಥಿಗಳಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಾ. ಶರಣಪ್ಪ ಕವಡೆ ಮಾತನಾಡಿದರು.
ಬ್ಯಾಡ್ಮಿಂಟನ್ ಅಸೋಶಿಯೇಷನ್ ಅಧ್ಯಕ್ಷ ಸಾಯಬಣ್ಣ ಕಾಶಿ, ಬಂಜಾರಾ ಸಮಾಜ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಆರ್ಯ ಈಡಿಗ ಸಮಾಜದ ಯುವ ಅಧ್ಯಕ್ಷ ಪಂಕಜಗೌಡ್, ಪದಾಧಿಕಾರಿಗಳಾದ ನಟರಾಜ್ ಶಿಲ್ಪಿ, ಶಾಂತಕುಮಾರ್ ಮಳಖೇಡ, ಜಗದೇವ ಕುಂಬಾರ, ಉಮೇಶಬಾಬು ದಿಗ್ಗಾಂವ, ದೇವಿದಾಸ ಚವ್ಹಾಣ, ಚಿದಾನಂದ, ವಿನಯಕುಮಾರ್ ಶಿಲ್ಪಿ ಸೇರಿದಂತೆ ಇತರರು ಇದ್ದರು.
ಪ್ರದಾನ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ದೇವಪ್ಪ ನಂದೂರಕರ್ ವಂದಿಸಿದರು.