ನಾಲವಾರ ಕಸಾಪ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ: ಶ್ರೀವಾಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಾಧನೆಗಳು ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಪಶುವೈದ್ಯಾಧಿಕಾರಿ ಡಾ. ಶ್ರೀವಾಣಿ ಹೇಳಿದರು.
ತಾಲೂಕಿನ ನಾಲವಾರ ಗ್ರಾಮದ ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚಿನ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಕಸಾಪ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಂದೆ-ತಾಯಿಯರ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಕಸಾಪ ಗೌರವ ಕಾರ್ಯದರ್ಶಿ ಅರುಣಕುಮಾರ ಸುಣಗಾರ ಮಾತನಾಡಿ, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೇ ಆಯ್ಕೆ ಮಾಡಿಕೊಂಡು ಶ್ರೇಷ್ಠ ಸಾಧನೆ ಮಾಡಬೇಕು. ಜಗತ್ತಿಗೆ ಅಗತ್ಯವಿರುವ ಕಾರ್ಯವನ್ನು ಗುರಿಯಾಗಿಸಿಕೊಂಡು ಇಂದಿನಿಂದಲೇ ಬದಲಾವಣೆಯೊಂದಿಗೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಲವಾರ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಮತ್ತು ಶ್ರೀ ಕೋರಿಸಿದ್ಧೇಶ್ವರ ಶಿಕ್ಷಣ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ, ಕೊಲ್ಲೂರು ಹಾಗೂ ತರಕಸಪೇಠ ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಲೇವಡಿ, ಗೌರವ ಕಾರ್ಯದರ್ಶಿ ಸಿದ್ದುಗೌಡ ಕುರಾಳ (ಸುಗೂರ ಎನ್), ಕಾಂಗ್ರೆಸ್ ಯುವ ಮುಖಂಡ ಸಂತೋಷ ಮಳಬಾ, ಶ್ರೀಧರ ಪತ್ತಾರ, ಹೋಬಳಿ ಘಟಕದ ಕಜಾಪ ಅಧ್ಯಕ್ಷ ರಾಜೇಂದ್ರ ಕೊಲ್ಲೂರು, ಮಹಿಳಾ ಪ್ರತಿನಿಧಿ ಶಿವಲೀಲಾ ತುನ್ನೂರು, ಮಲ್ಲಿಕಾರ್ಜುನ ತಳವಾರ (ಸುಗೂರ ಎನ್), ನಾಗರಾಜ ಸಾಹು ಇಂಗಳಗಿ, ಶರಣು ಸಾಹು ಮದರಕಿ, ಅನಿಲಕುಮಾರ ವಿಶ್ವಕರ್ಮ, ರವಿ ಮಠದ, ಮಲ್ಲೇಶಿ ಸೊಟ್ಟೆನ್ನರ್, ದೇವು ಪೂಜಾರಿ, ಸಲೀಂ ಮದರಕಿ, ಅಧಿಕಾರಿಗಳು, ವಿದ್ಯಾರ್ಥಿಗಳು ಈ ಮುಂಗಾರು ಮಕ್ಕಳ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಕವನಗಳ ವಾಚನ ಮಾಡಿದರು.
ಪಲ್ಲವಿ ಸಿದ್ದಪ್ಪ ಅವರಿಂದ ಭರತನಾಟ್ಯ ನಡೆಯಿತು. ಶಾಂತಕುಮಾರ ಎಣ್ಣಿ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್, ನಾಲವಾರ ಸ್ವಾಗತಿಸಿದರು, ಸೋಮನಾಥ ಕೊಚ್ಚೂರು ವಂದಿಸಿದರು.

