Oplus_131072

ಹಲಕರ್ಟಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡಿ, ಶಿಕ್ಷಣದ ಗುಣಮಟ್ಟ ಬಲಪಡಿಸಿ: ಶರಣು ಹೇರೂರು 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡಿ ಅಭಿವೃದ್ಧಿ ಪಡೆಸುವಂತೆ ಆಗ್ರಹಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ ನಾಯಕ ಶರಣು ಹೇರೂರು ಮಾತನಾಡಿ, ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮವು ಅತೀ ಹೆಚ್ಚು ದಿನಗೂಲಿ-ರೈತ ಕಾರ್ಮಿಕರನ್ನು ಹಾಗೂ ವಲಸೆ ಕಾರ್ಮಿಕರನ್ನು ಹೊಂದಿರುವ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಜಿ ನಗರ ಶಾಲೆಗಳಿದ್ದು, ಈ ಶಾಲೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಶಿಕ್ಷಣದ ಗುಣಮಟ್ಟವನ್ನು ಕಳೆದು ಕೊಳ್ಳುತ್ತಿವೆ ಇದರ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್ಓ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ಹರಿಜನವಾಡ ಏರಿಯಾದಲ್ಲಿ ಇರುವ ಸರ್ಕಾರಿ ಶಾಲೆಯು ಎರಡು ಕೊಠಡಿಗಳನ್ನು ಒಳಗೊಂಡಿದ್ದು, ಆ ಕಟ್ಟಡವು ಸಂಪೂರ್ಣವಾಗಿ ಹಾಳಾಗಿದೆ. ಮಳೆ ಬಂದರೆ ಮೇಲ್ಚಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನರುಳುತ್ತಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಕೂಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಹಾಗೂ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಜಿ ನಗರ ತಾಂಡಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲಕರ್ಟಿಯಲ್ಲಿಯೂ ಕುಡಿಯುವ ನೀರು, ಶೌಚಾಲಯದಂತ ಸೌಲಭ್ಯಗಳಿಂದ ಹಿಂದುಳಿದಿವೆ. ಇದರಿಂದಾಗಿ ಸರ್ಕಾರಿ ಶಾಲೆಗಳು ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಪ್ರತಿವರ್ಷ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ, ಹೀಗಾಗಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿಷಯವಾರು ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಆಗ್ರಹಿಸಿದರು.

ಯುವಜನ ಸಂಘಟನೆಯ ವಾಡಿ ಸ್ಥಳೀಯ ಕಾರ್ಯದರ್ಶಿ ಗೌತಮ್ ಪರರ್ತುರಕ್ ಮಾತನಾಡಿ, ಕಡಿಮೆ ದಾಖಲಾತಿ ಹೊಂದಿರುವ ಹಲಕರ್ಟಿ ಗ್ರಾಮದ ಈ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ, ಈ ಕೂಡಲೇ ನೂತನ ಕಟ್ಟಡಕ್ಕೆ ಮಂಜೂರಾತಿ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಅಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದನ್ನು ಬಿಟ್ಟು ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು. ಒಂದು ವೇಳೆ ಸರ್ಕಾರಿ ಶಾಲೆಗಳು ಮುಚ್ಚಿದರೆ ಮುಂದೆ ಬರುವಂತಹ ದಿನಗಳಲ್ಲಿ ಬಡ ಮಕ್ಕಳಿಗೆ ಶಿಕ್ಷಣ ದೊರಕುವುದಿಲ್ಲ ಈ ನೀತಿಯನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹಲಕರ್ಟಿ ಕ್ಲಸ್ಟರ್ ಸಂಪನ್ಮೂಲ ವ್ಯಕಿ (ಸಿಆರ್’ಸಿ) ಹೀರಾಬಾಯಿ ಅವರು ಮನವಿ ಪತ್ರವನ್ನು ಸ್ವೀಕರಿಸಿದರು.

ಈ ಪ್ರತಿಭಟನೆಯಲ್ಲಿ ಮಲ್ಲಿನಾಥ ಹುಂಡೇಕಲ್, ಚೌಡಪ್ಪ ಗಂಜಿ, ಗೋವಿಂದ ಯಳವಾರ, ಸಿದ್ದಾರ್ಥ್ ತಿಪ್ಪನೂರು, ದತ್ತು ಹುಡೇಕರ್, ಸಂಪತ್ ಗೌಂಡಿ, ಮಹಾದೇವಿ, ಗೋದಾವರಿ ಕಾಂಬಳೆ, ಸುದೀಪ್, ಆಕಾಶ್, ಮೋಹನ್ ಅಕ್ಕಿ, ಕಾರ್ತಿಕ್, ಸಂತೋಷ್, ಅನಿತಾ ಸೇರಿದಂತೆ ಹಲವರು  ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!