ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ | ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಧರ್ಮಸ್ಥಳ ಯೋಜನೆಗಳು ಪೂರಕ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಧರ್ಮಸ್ಥಳ ಯೋಜನೆಗಳು ಪೂರಕ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಪೆದ್ದು ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಯೋಜನೆ ಬಿಸಿ ಟ್ರಸ್ಟ್ ಚಿತ್ತಾಪುರ ತಾಲೂಕು, ಪದ್ಮ ವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕೆ ಸಾಲ ಸೌಲಭ್ಯ, ಟೈಲರಿಂಗ್ ಸೇರಿದಂತೆ ವಿವಿಧ ತರಬೇತಿಗಳು, ಹಲವು ಅರಿವು ಕಾರ್ಯಕ್ರಮಗಳು, ವೃದ್ಧರಿಗೆ ಮಾಸಾಶನ, ಮಕ್ಕಳಿಗೆ ಟ್ಯೂಷನ್, ಕ್ಷೇತ್ರ ಅಧ್ಯಾಯನ ಪ್ರವಾಸ ಹೀಗೆ ಹತ್ತಾರು ಯೋಜನೆಗಳಿವೆ. ಈ ಯೋಜನೆಗಳ ಲಾಭ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸಮಾಜದಲ್ಲಿ ಯಾವುದೇ ಮೇಲು-ಕೀಳು ಇಲ್ಲದೆ ಸರ್ವಧರ್ಮದವರನ್ನು ಸಮಭಾವದಿಂದ ಆದರಿಸಿ ಸರ್ಕಾರದಿಂದ ಸಾಧ್ಯವಾಗದ ಅನೇಕ ಕೆಲಸಗಳನ್ನು ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿ 2016 ರಿಂದ ಧರ್ಮಸ್ಥಳ ಸಂಸ್ಥೆ ಬಂದಾಗಿನಿಂದ ಇಲ್ಲಿನ ಮಹಿಳೆಯರ ವ್ಯಕ್ತಿತ್ವ ವಿಕಸನ ಆಗಿದೆ ಹಾಗೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹಲವು ಮಹಿಳೆಯರ ಬದುಕು ಕಟ್ಟಿಕೊಟ್ಟಿದೆ ಎಂದರು.
ಮುಖ್ಯ ಅತಿಥಿಯಾಗಿ ಪುರಸಭೆ ಸದಸ್ಯ ಶ್ಯಾಮ ಮೇಧಾ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಹೀಗಾಗಿ ಮಹಿಳೆಯರು ಇದರ ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಸಂಸ್ಥೆಯ ಸೇವಾ ಪ್ರತಿನಿಧಿಗಳು ಮನೆ ಕಾರ್ಯಕ್ರಮದಂತೆ ಆಸಕ್ತಿಯಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರಂಗೋಲಿ ಮತ್ತು ಬಲೂನ್ ಆಟದಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಫಲಾನುಭವಿ ಜಗದೇವಿ ಅವರು, ಪ್ರತಿ ತಿಂಗಳ ಸಭೆಗಳು ನಡೆಸಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ್ದು ತುಂಬಾ ಉಪಯುಕ್ತವಾಗಿವೆ. ಸಾಲಸೌಲಭ್ಯದಿಂದ ನಾನು ಟೈಲರಿಂಗ್ ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದರು. ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರವನ್ನು ನಾನು ಖಂಡಿಸುತ್ತೇನೆ ಎಂದರು.
ತಾಲೂಕು ಸಮನ್ವಯ ಅಧಿಕಾರಿ ಅರ್ಚನಾ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೆದ್ದು ಮಠದ ಕಾರ್ಯದರ್ಶಿ ಮಂಜುನಾಥ್ ಜೈಗುರು, ಸೇವಾ ಪ್ರತಿನಿಧಿ ತ್ರಿವೇಣಿ, ಧರ್ಮಸ್ಥಳ ಸಂಘಗಳ ಒಕ್ಕೂಟದ ಅಧ್ಯಕ್ಷೆ ಫರೀದಾ ಬೇಗಮ್, ಪ್ರಭಾವತಿ, ಚೈತ್ರಾ, ಆಸ್ಮಾ ಸೇರಿದಂತೆ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಜಗದೇವಿ ಪ್ರಾರ್ಥನಾ ಗೀತೆ ಹಾಡಿದರು, ವಲಯ ಮೇಲ್ವಿಚಾರಕರಾದ ಮಂಜುನಾಥ ಹಿರೇಮಠ್ ಸ್ವಾಗತಿಸಿದರು. ಅರ್ಚನಾ ಅವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.

