Oplus_0

64 ನೇ ವಾರ್ಷಿಕ ಮಹಾಸಭೆ | ಪಿಕಾರ್ಡ್ ಬ್ಯಾಂಕಿನಿಂದ ರೈತರಿಗೆ 5 ಕೋಟಿ ಸಾಲ ನೀಡುವ ಗುರಿ: ಭೀಮಣ್ಣ ಸಾಲಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ರೈತ ಪರವಾದ ಪಿಕಾರ್ಡ್ ಬ್ಯಾಂಕ್ ರೈತರ ಹಿತದೃಷ್ಟಿಯಿಂದ 5 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2024-25 ನೇ ಸಾಲಿನ ಸಹಕಾರಿ ವರ್ಷದ 64 ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಕಾರ್ಡ್ ರೈತರ ಪರವಾದ ಬ್ಯಾಂಕ್ ಆಗಿದ್ದು ಸಾಲ ತೆಗೆದುಕೊಂಡವರು ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬ್ಯಾಂಕಿನ ಸುಸ್ತಿ ಸಾಲಗಾರರು ಪ್ರಸಕ್ತ ಸಾಲಿನಲ್ಲಿ ತಮ್ಮ ಸುಸ್ತಿ ಸಾಲವನ್ನು ಮರುಪಾವತಿ ಮಾಡಿ ಬ್ಯಾಂಕಿನಿಂದ ದೊರೆಯುವ ಬಡ್ಡಿ ರಿಯಾಯಿತಿ ಲಾಭವನ್ನು ಪಡೆದುಕೊಂಡು ಬ್ಯಾಂಕಿನ ವಸೂಲಾತಿ ಗುರಿ ಶೇ. 78.70  ಪ್ರತಿಶತ ತಲುಪಲು ಸಹಕರಿಸಿದ್ದಕ್ಕೆ ಅಭಿನಂದನೆಗಳು ಸಲ್ಲಿಸಿದರು.

ಬ್ಯಾಂಕಿನ ಸ್ಥಿತಿ ಉತ್ತಮಪಡಿಸಲು ಬ್ಯಾಂಕಿನ ಬೈಲಾ ತಿದ್ದುಪಡಿ ಮಾಡಲಾಗಿದ್ದು ಅದರಂತೆ ಸದಸ್ಯತ್ವ ಪಡೆಯಲು ರೂ.2,500 ಶೇರು ಹಣ ಮತ್ತು ರೂ.250 ಶೇರು ಫೀ ಹೆಚ್ಚಿಗೆ ಮಾಡಲಾಗಿದೆ. ಆದ್ದರಿಂದ ರೂ.2,200 ಸದಸ್ಯರಿದ್ದವರು ತಮ್ಮ ವ್ಯತ್ಯಾಸದ ಮೊತ್ತವನ್ನು ಪಾವತಿಸಿ ಸದಸ್ಯತ್ವ ಮುಂದುವರೆಸಿಕೊಳ್ಳಲು ಕೋರಿದರು. ಹಿಂದಿನ ಚಾಳಿ ಬಿಡಿ, ಆಗ ಯಾರಿಗೂ ಕರೆಯದೇ ಸಾಮಾನ್ಯ ಸಭೆ ನಡೆಯುತ್ತಿತ್ತು ಈಗ ಎಲ್ಲರಿಗೂ ನೋಟಿಸ್ ನೀಡಿ ಇದು ರೈತರ ಬ್ಯಾಂಕ್ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್ ಮಾತನಾಡಿ, ಎಲ್ಲಾ ಸದಸ್ಯರಿಗೆ ನೋಟಿಸ್ ಕಳುಹಿಸಿ ಸದಸ್ಯರ ಪಟ್ಟಿ ಪರಿಷ್ಕರಣೆ ಮಾಡಿ ಮರಣ ಹೊಂದಿದವರನ್ನು ತೆಗೆದು ಅವರ ಕುಟುಂಬದಲ್ಲಿ ಒಬ್ಬರಿಗೆ ಸದಸ್ಯತ್ವ ನೀಡಿ ಹಾಗೂ ಹೊಸ ಸದಸ್ಯತ್ವ ನೀಡಿ ಎಂದು ಹೇಳಿದರು. ಆಗ ವ್ಯವಸ್ಥಾಪಕಿ ಕುಸುಮಾವತಿ ಖನ್ನಾ ಮಾತನಾಡಿ, ಎಲ್ಲರಿಗೂ ನೋಟಿಸ್ ಕಳಿಸಲಾಗುವುದು ಹಾಗೂ ವಾಟ್ಸಾಪ್ ಗ್ರೂಪ್ ಮಾಡಲಾಗುವುದು ಎಂದರು.

7 ವರ್ಷಗಳಿಂದ ಬ್ಯಾಂಕಿನಲ್ಲಿ ನನ್ನ ವ್ಯವಹಾರ ಇದೆ ಆದರೆ ಇಲ್ಲಿವರೆಗೆ ಸಭೆಯ ನೋಟಿಸ್ ಬಂದಿಲ್ಲ ಈಗ ನಿರ್ದೇಶಕನಾದ ಮೇಲೆ ಮೊದಲ ಸಲ ನೋಟಿಸ್ ಬಂದಿದೆ ಎಂದು ನಿರ್ದೇಶಕ ರಾಜಶೇಖರ್ ಕೊಂಕನಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಆಗ ವ್ಯವಸ್ಥಾಪಕಿ ಕುಸುಮಾವತಿ ಖನ್ನಾ ಮಾತನಾಡಿ, ಎಲ್ಲರಿಗೂ ನೋಟಿಸ್ ಕಳುಹಿಸಿದ್ದೇವೆ ಆದರೆ ಅವು ತಲುಪದೆ ಹಿಂದುರುಗಿ ಬಂದಿವೆ ಎಂದು ಉತ್ತರಿಸಿದರು.

ಹಿರಿಯ ಕ್ಷೇತ್ರಾಧಿಕಾರಿ ಬಸವರಾಜ ರೇವೂರ ಮಾತನಾಡಿ, ಕಾಸ್ಕಾರ್ಡ ಬ್ಯಾಂಕಿನ ವಿವಿಧ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಪಡೆದ ಸಾಲಗಳು ರೂ.11,24,76 ಲಕ್ಷ ಆಗಿದ್ದು, ರೈತರಿಂದ ಬರಬೇಕಾದ ಸಾಲ ವಸೂಲಿ ರೂ.315.34 ಲಕ್ಷ ಇರುತ್ತದೆ. ನಮ್ಮ ಬ್ಯಾಂಕಿನಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ.100.00 ಲಕ್ಷ ಆರ್ಥಿಕ ಹಂಚಿಕೆಯನ್ನು ಕೊಟ್ಟಿರುತ್ತಾರೆ. ಇದನ್ನು ಉಪಯೋಗಿಸಲು ಯೋಜನಾವಾರು ವಸೂಲಾತಿ ಗುರಿಯನ್ನು ನಿಗದಿಪಡಿಸಿರುತ್ತಾರೆ, ಪ್ರಸಕ್ತ ಸಾಲಿನಲ್ಲಿ 4 ಜನರಿಗೆ ಟ್ರ್ಯಾಕ್ಟರ್ ಯೋಜನೆಯಲ್ಲಿ ರೂ.36.50 ಲಕ್ಷ ಮತ್ತು ಟ್ರ್ಯಾಕ್ಟರ್ ವಿಮೆ ಮೊತ್ತ ಸಾಲ ಮೊತ್ತ ರೂ.3.97 ಲಕ್ಷ ಮತ್ತು ಭೂ ಅಭಿವೃದ್ಧಿ ಯೋಜನೆಯಲ್ಲಿ 36 ಜನ ರೈತರಿಗೆ ರೂ.90.36 ಲಕ್ಷ ಸಾಲ ವಿತರಿಸಿದೆ. 2025-26 ನೇ ಸಾಲಿನ ಆರ್ಥಿಕ ಹಂಚಿಕೆ ಸಾಲ 1015.00 ಬಂದಿರುತ್ತದೆ ಎಂದು ಮಾಹಿತಿ ನೀಡಿದರು. ಮಾರ್ಚ್ 31 ಕ್ಕೆ ಒಟ್ಟು ರೂ.109.01 ಲಕ್ಷ ತಗಾದೆಯಲ್ಲಿ ವಸೂಲಾತಿ ರೂಂ.85.79 ಲಕ್ಷ ವಸೂಲಿಯಾಗಿದ್ದು ರೂ.23.22 ಲಕ್ಷ ಬಾಕಿ ಉಳಿದಿರುತ್ತದೆ, ಪ್ರತಿಶತ 78.70 ರಷ್ಟು ವಸೂಲಾತಿಯಾಗಿರುತ್ತದೆ ಎಂದು ತಿಳಿಸಿದರು.

ಬ್ಯಾಂಕಿನ ನಿರ್ದೇಶಕರಾದ ಯಂಕಾರೆಡ್ಡಿ ಪೋತಲ್, ಅಶೋಕ ನಿಪ್ಪಾಣಿ, ರಾಜಶೇಖರ್ ಕೊಂಕನಳ್ಳಿ, ಜಾವೀದ್ ಪಟೇಲ್, ರಮೇಶ್ ಜಾಧವ, ಸದಸ್ಯರಾದ ಶಿವಯೋಗಿ ಸಾಹು, ಸೂರ್ಯಕಾಂತ ಪೂಜಾರಿ, ಮಲ್ಲಿಕಾರ್ಜುನ ಎಮ್ಮೆನೋರ್, ಜಗನ್ನಾಥ ಮುಡಬೂಳಕರ್, ನಾಗರೆಡ್ಡಿ ಗೋಪಸೇನ್, ವ್ಯವಸ್ಥಾಪಕಿ ಕುಸುಮಾವತಿ ಖನ್ನಾ, ಹಿರಿಯ ಕ್ಷೇತ್ರಾಧಿಕಾರಿ ಬಸವರಾಜ ರೇವೂರ, ಲೆಕ್ಕಾಧಿಕಾರಿ ಶಾರದಾಬಾಯಿ ಸ್ವಾಮಿ, ಸಂಗಣ್ಣ ಬಂಡಿ, ಸಂತೋಷ ರಾಠೋಡ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!