ಜಾತಿ ಜನಗಣತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಲು ವೀರಶೈವ ಲಿಂಗಾಯತ ಮಹಾಸಭಾ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜಾತಿ ಜನಗಣತಿಯ ಮುಖ್ಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ, ಉಪಜಾತಿ ಕಾಲಂನಲ್ಲಿ ನಿಮ್ಮ ಉಪ ಜಾತಿಯನ್ನು ನಮೂದಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಕರೆ ನೀಡಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22 ರಿಂದ ಅ.7 ರವರೆಗೆ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಡಿ ಜಾತಿ ಗಣತಿಯಲ್ಲಿ 9, 10, ಮತ್ತು 11 ಕಾಲಂಗಳು ಬಹಳ ಪ್ರಮುಖವಾಗಿದ್ದು, ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ರೆಡ್ಡಿ ಲಿಂಗಾಯತ, ಹೂಗಾರ, ಹಟಗಾರ ಸೇರಿದಂತೆ ಇತರೆ ಉಪಜಾತಿ ನಮೂದಿಸಬೇಕು ಎಂದು ಹೇಳಿದರು.
ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ. ಒಂದೇ ಎಂಬುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿಲುವಾಗಿದ್ದು, ಹೀಗಾಗಿ ಯಾವುದೇ ಗೊಂದಲಕ್ಕೆ ಒಳಗಾಗದೆ ಜಾತಿ ಕಾಲಂನಲ್ಲಿ ವೀರಶೈವ-ಲಿಂಗಾಯತ ಅಂತ ನಮೂದಿಸಬೇಕು ಮನವಿ ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಣಯವೇ ಅಂತಿಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಪದಾಧಿಕಾರಿಗಳಾದ ಆನಂದ ಪಾಟೀಲ ನರಿಬೋಳ, ಶಾಂತಣ್ಣ ಚಾಳೀಕಾರ, ಮಲ್ಲರೆಡ್ಡಿ ಗೋಪಸೇನ್, ಚಂದ್ರಶೇಖರ ಉಟಗೂರ, ಅನೀಲ್ ವಡ್ಡಡಗಿ, ಬಸವರಾಜ ಸಂಕನೂರ, ಪ್ರಸಾದ್ ಅವಂಟಿ, ಬಸವರಾಜ ಹೂಗಾರ, ವೀರಭದ್ರಪ್ಪ ಹುಮನಾಬಾದ್, ಬಸವಂತರಾವ್ ಮಾಲಿ ಪಾಟೀಲ್, ಕೋಟೇಶ್ವರ ರೇಷ್ಮಿ, ಮಲ್ಲು ಇಂದೂರ, ಚಂದ್ರಶೇಖರ ಬಳ್ಳಾ ಇದ್ದರು.

