Oplus_0

ತಾಂತ್ರಿಕ ದೋಷ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ  | ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಶಿಕ್ಷಕರ ಸಂಘ ಒತ್ತಾಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಗಣತಿ ಕಾರ್ಯದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಗಣತಿದಾರರು ಗುರುವಾರ ಪ್ರಜಾ ಸೌಧದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿ, ಸೆ. 22 ರಿಂದ ಪ್ರಾರಂಭವಾದ ಸಮೀಕ್ಷೆಯು ಮೋಬೈಲ್ ಆ್ಯಪ್ ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಗಣತಿದಾರರಿಗೆ ಇನ್ನೂ ಗಣತಿಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಕಾರಣ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಗಣತಿ ಕಾರ್ಯ ಸುಗಮವಾಗಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಎರಡ್ಮೂರು ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗಣತಿದಾರರಿಗೆ ಹಂಚಿಕೆ ಮಾಡಲಾದ ಮನೆಗಳು ಬೇರೆ ಬೇರೆ ಪ್ರದೇಶ ಹಾಗೂ ಊರುಗಳಲ್ಲಿ ಇರುವುದರಿಂದ ಸಮೀಕ್ಷೆ ಮಾಡಲು ತೊಂದರೆಯಾಗುತ್ತಿದೆ, ಗಣತಿದಾರರಿಗೆ ಮನೆ ಪಟ್ಟಿ ನೀಡಬೇಕು, ಶಿಕ್ಷಕರು ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೊ ಅದೇ ಸ್ಥಳದಲ್ಲಿ ಗಣತಿ ಕಾರ್ಯ ನಿಯೋಜಿಸುವುದು, ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕ/ಶಿಕ್ಷಕಿಯರಿಗೆ ಗಣತಿ ಕಾರ್ಯದಿಂದ ವಿನಾಯತಿ ನೀಡುವುದು ಹಾಗೂ ಪೃಥಾ ಹಾಗೂ ನರ್ವೇ ಆ್ಯಪ್ ಸರಿಯಾಗಿ ಕಾರ್ಯ ನಿರ್ವಹಿಸುವವರೆಗೂ ಶಿಕ್ಷಕರಿಗೆ ಬಿಡುವು ನೀಡಬೇಕೆಂದು ಆಗ್ರಹಿಸಿದರು.

ಶಿಕ್ಷಕಿ ಶಿವಲೀಲಾ ಮಾತನಾಡಿ, ನವರಾತ್ರಿ ಉತ್ಸವದ ಪೂಜೆ ಪುನಸ್ಕಾರಕ್ಕೆ ಸರ್ಕಾರ ಸಮೀಕ್ಷೆ ನೆಪದಲ್ಲಿ ಅವಕಾಶ ಮಾಡಿಕೊಡುತ್ತಿಲ್ಲ, ತಾಂತ್ರಿಕ ಸಮಸ್ಯೆಯಿಂದ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ ಯ್ಯಾಪ್, ಮ್ಯಾಪ್ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಶಿಕ್ಷಕರು ಅಲೆದಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ದೇವಿಂದ್ರಪ್ಪ ಇಮಡಾಪೂರ ಮಾತನಾಡಿ, ಚಿತ್ತಾಪುರ ಪಟ್ಟಣದ ವಾರ್ಡ್ ನಂ.17 ಬಂದಿದೆ ಆದರೆ ಸಮೀಕ್ಷೆಯಲ್ಲಿ ಭೀಮನಳ್ಳಿ, ರಾಮತೀರ್ಥ ಎಂದು ತೋರಿಸುತ್ತದೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಕಿ ಅಂಬಿಕಾ ಮಾತನಾಡಿ ನನ್ನ ವಯೋ ನಿವೃತ್ತಿ ಜನವರಿಯಲ್ಲಿ ಇದೆ, ನನ್ನ ಆರೋಗ್ಯ ಸರಿಯಿಲ್ಲ ಆದರೂ ಗಣತಿ ಕಾರ್ಯಕ್ಕೆ ಹಾಕಿದ್ದಾರೆ ಹೀಗಾಗಿ ನನ್ನನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಶಿಕ್ಷಕಿ ಮಹೇಶ್ವರಿ ಮಾತನಾಡಿ, ನಾನು ಚಾಮನೂರ ಶಾಲೆಯ ಶಿಕ್ಷಕಿ ಆದರೆ ಮೊಗಲಾ ತಾಂಡಾಕ್ಕೆ ಸಮೀಕ್ಷೆ ಕಾರ್ಯಕ್ಕೆ ಹಾಕಿದ್ದಾರೆ ಇದರಿಂದ ಹೋಗಿಬರಲು ತೊಂದರೆ ಆಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕ ಗಣತಿದಾರರಾದ ಕಾಶಿರಾಯ ಕಲಾಲ್, ಸುರೇಶ್ ಸರಾಫ್, ವೀರಸಂಗಪ್ಪ ಸುಲೇಗಾಂವ, ವೀರಭದ್ರಪ್ಪ ಗುರುಮಿಠಕಲ್, ಶರಣಬಸಪ್ಪ ಬೊಮ್ಮನಳ್ಳಿ, ಆದಪ್ಪ ಬಗಲಿ, ಸುರೇಶ್ ಓಂಕಾರ, ಶರಣಪ್ಪ ಐಕೂರ, ಡಾ.ರಾಜಕುಮಾರ್, ಮಲ್ಲಿನಾಥ, ಅಂಬಣ್ಣ, ವಿಜಯಕುಮಾರ್ ಭಂಕಲಗಿ, ಮನೋಹರ ಹಡಪದ, ವಿರೇಶ ಕರದಾಳ, ಅನ್ನಪೂರ್ಣ, ಸುಜಾತಾ, ಮಲ್ಲಿನಾಥ ಬಾಹರಪೇಟ್ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೂ ಮನವಿ ಪತ್ರ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!