ಲಿಂಗಣ್ಣ ಸತ್ಯಂಪೇಟೆ ಸಂಸ್ಮರಣೆ ಜು.25 ರಂದು | ಬಸವ ಮಾರ್ಗ ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಶರಣ ಸಾಹಿತಿ ಲಿಂ. ಲಿಂಗಣ್ಣ ಸತ್ಯಂಪೇಟೆಯವರ 14ನೇ ಸ್ಮರಣೋತ್ಸವ ನಿಮಿತ್ತ ಬಸವ ಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ‘ಅಪ್ಪನ ಒಡನಾಟ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜು.25 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಮಾರ್ಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದ್ದಾರೆ.
ಮುದಗಲ್ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಉದ್ಘಾಟಿಸಲಿದ್ದಾರೆ. ವಕೀಲ ಸಂತೋಷ ಸತ್ಯಂಪೇಟೆಯವರು ರಚಿಸಿರುವ ‘ಅಪ್ಪನ ಒಡನಾಟ’ ಕೃತಿಯನ್ನು ಶಾಸಕ ಬಿ.ಆರ್. ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಗುಲ್ಬರ್ಗ ವಿವಿ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ. ಅಶೋಕ ದೊಡ್ಡಮನಿ ಕೃತಿ ಕುರಿತು ಮಾತನಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆಯಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ. ಬಿ.ಎಸ್. ಸುಧಾಕರ ಅವರಿಗೆ ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಬಸವ ಮಾರ್ಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5,000 ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯ ಅತಿಥಿಗಳಾಗಿ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ, ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ಕರ್ನಾಟಕ ರಾಜ್ಯ ವೈಜ್ಞಾನಿಕ ಹಾಗೂ ಸಂಶೋಧನ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಗಮಿಸಲಿದ್ದಾರೆ. ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

