ಕೂಲಿಕಾರರ ಜಾಬ್ ಕಾರ್ಡ್ ಗೆ ಇ.ಕೆವೈಸಿ ಲಿಂಕ್, ನರೇಗಾ ಅಕ್ರಮಕ್ಕೆ ಬ್ರೇಕ್ !

ನಾಗಾವಿ ಎಕ್ಸಪ್ರೆಸ್

ವಾಡಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಅಕ್ರಮ ಭ್ರಷ್ಟಾಚಾರ ತಡೆಗಟ್ಟಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಗ ಕೂಲಿಕಾರ್ಮಿಕರ ಜಾಬ್ ಕಾರ್ಡಗಳಿಗೆ ಇ-ಕೆವೈಸಿ ಅಪಡೇಟ್ ಮಾಡಿಸುವ ಹೊಸ ತಂತ್ರಜ್ಞಾನ ಜಾರಿಗೆ ತಂದಿದೆ. ಇದರಿಂದ ನರೇಗಾದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದಲ್ಲಿ ಮನರೇಗಾ ಯೋಜನೆಯಡಿ ಬಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೆಲ ಜಿಲ್ಲೆಗಳಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ, ಎಚ್ಚೆತ್ತ ಸರ್ಕಾರ ನರೇಗಾದಲ್ಲಿ ಪಾರದರ್ಶಕತೆ ಮತ್ತು ಅಕ್ರಮ ತಡೆ ಗಟ್ಟುವ ಸಲುವಾಗಿ ನೋಂದಾಯಿತ ಸಕ್ರಿಯವಾದ ಕಾರ್ಮಿಕರ ಜಾಬ್ ಕಾರ್ಡಗಳಿಗೆ ಇ-ಕೆವೈಸಿ ಅಪಡೇಟ್ ಮಾಡಿಸುವುದು ಕಡ್ಡಾಯವಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ನರೇಗಾ ಸಿಬ್ಬಂದಿಗಳು ಇ-ಕೆವೈಸಿ ಕಾರ್ಯದಲ್ಲಿ ತೊಡಗಿದ್ದಾರೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲು ಕಾಮಗಾರಿಗಳಲ್ಲಿ ಭಾಗವಹಿಸುವ ಕೂಲಿಕಾರರ ಹಾಜರಾತಿಯನ್ನು ಮೊದಲು ಎನ್‌ಎಮ್‌ಎಮ್‌ಎಸ್‌ ಆಪ್‌ನಲ್ಲಿ ಸೆರೆಹಿಡಿಯಲಾಗುತ್ತಿತ್ತು. ಆದರೆ ಇದರಲ್ಲಿಯೂ ಭ್ರಷ್ಟಾಚಾರ, ಅಕ್ರಮಗಳ ಪ್ರಕರಣ ವರದಿಯಾಗಿದ್ದ ಪರಿಣಾಮ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಪ್ರಾಯೋಗಿಕವಾಗಿ ಎನ್‌ಎಮ್‌ಎಮ್‌ಎಸ್‌-ಇ-ಕೆ.ವೈಸಿ (NMMS-e-KYC) ಆಪ್‌ನಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಅಪಡೇಟ್ ಮಾಡಲು ರಾಜ್ಯದ 6 ಜಿಲ್ಲೆಗಳಲ್ಲಿ ಆರಂಭಗೊಳಿಸಲಾಗಿತ್ತು. ಆದರೆ ಈ ಜಿಲ್ಲೆಗಳಲ್ಲಿ ಇ-ಕೆವೈಸಿ ಅಪಡೇಟ್ ಕಾರ್ಯ ಯಶಸ್ವಿ ನಂತರ ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರಿಂದ ನರೇಗಾ ಸಕ್ರಿಯ ಪ್ರತಿ ಕೂಲಿಕಾರ್ಮಿಕರ ಜಾಬ್ ಕಾರ್ಡಗೆ ಇ- ಕೆವೈಸಿ ಅಪಡೇಟ್ ಮಾಡಿಸುವುದು ಅಗತ್ಯವಾಗಿದೆ.

ಚಿತ್ತಾಪುರ ತಾಲೂಕಿನ ಮನರೇಗಾದಲ್ಲಿ ಕೆಲಸ ಮಾಡುತ್ತಿರುವ ನೋಂದಾಯಿತ ಸಕ್ರಿಯ ಕೂಲಿಕಾರ್ಮಿಕರು ಒಟ್ಟು ಸಂಖ್ಯೆ 27319 ಕಾರ್ಮಿಕರು ಇದ್ದಾರೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಡಂಗೂರ ಸಾರಿ ಜನರಿಗೆ ಇ-ಕೆವೈಸಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಕಾಯಕ ಮಿತ್ರ, ತಾಂತ್ರಿಕ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ನರೇಗಾ ಕಾಯಕ ಬಂದುಗಳು ಸೇರಿ ಕಾರ್ಮಿಕರ ಜಾಬ್ ಕಾರ್ಡಗಳಿಗೆ ಇ-ಕೆ.ವೈಸಿ ಅಪಡೇಟ್ ಮಾಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸರ್ವರ್ ಸಮಸ್ಯೆ: ನರೇಗಾ ಕೂಲಿಕಾರ್ಮಿಕರ ಜಾಬ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸುವ ಸಲುವಾಗಿ ನರೇಗಾ ಕಾಯಕ ಮಿತ್ರರು ತೊಡಗಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಜಾಬ್ ಕಾರ್ಡ್.ಗೆ ಬೇಗ ಇ-ಕೆವೈಸಿ ಲಿಂಕ್ ಆಗುತ್ತಿಲ್ಲ. ಇದರಿಂದ ಕಾರ್ಮಿಕರು, ರೈತ ಕೃಷಿ ಕೂಲಿಕಾರರು ಕೆಲಸಕ್ಕೆ ಹೋಗದೇ ತಮ್ಮ ಜಾಬ್ ಕಾರ್ಡ್ ಗೆ ಲಿಂಕ್ ಮಾಡಿಸುವುದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಇಂಗಳಗಿ ಗ್ರಾಮದಲ್ಲಿ ನೋಂದಾಯಿತ ಸಕ್ರಿಯ ಕೂಲಿಕಾರ್ಮಿಕರು 1712 ಜನರು ಇದ್ದಾರೆ. ಇದರಿಂದ ಜಾಬ್ ಕಾರ್ಡ್ ಗಳಿಗೆ ಇ-ಕೆವೈಸಿ ಅಪಡೇಟ್ ಹೇಗೆ ಮಾಡಬೇಕು ಎಂದು ಕಾಯಕ ಬಂದುಗಳಿಗೆ ಮಾಹಿತಿ ನೀಡಲಾಗಿದೆ. ಕಾಯಕ ಮಿತ್ರ ಗಿಡ್ಡಮ್ಮ ಪವಾರ್ ಮತ್ತು ಕಾಯಕ ಬಂದುಗಳು ಸೇರಿ ಜಾಬ್ ಕಾರ್ಡಗಳಿಗೆ ಇ-ಕೆವೈಸಿ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾರ್ಮಿಕರು ಸಹಕರಿಸುತ್ತಿದ್ದಾರೆ. ಅವಧಿಯೊಳಗೆ ಎಲ್ಲ ಜಾಬ್ ಕಾರ್ಡಗಳಿಗೆ ಲಿಂಕ್ ಮಾಡಿಸಲಾಗುತ್ತದೆ. ಎಂದು ಪಿಡಿಓ ಕಲ್ಯಾಣ ಕುಮಾರ ತಿಳಿಸಿದ್ದಾರೆ.

“ಇ-ಕೆವೈಸಿ ಜಾರಿಗೆ ತಂದಿರುವ ಮುಖ್ಯ ಉದ್ದೇಶ ಭ್ರಷ್ಟಾಚಾರ ತಡೆಗಟ್ಟುವುದಾಗಿದೆ. ಇದರಿಂದ ನರೇಗಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೂಲಿಕಾರ್ಮಿಕರು ತಮ್ಮ ಜಾಬ್ ಕಾರ್ಡಗೆ ಇ-ಕೆವೈಸಿ ಅಪಡೇಟ್ ಮಾಡಿಸುವುದು ಕಡ್ಡಾಯವಾಗಿದೆ. ಯಾರು ಇ-ಕೆವೈಸಿ ಮಾಡಿಸುವುದಿಲ್ಲ. ಅಂತಹ ಕಾರ್ಮಿಕರು ಕೆಲಸ ಮಾಡಿದರೂ ಎನ್‌ಎಮ್‌ಎಮ್‌ಎಸ್‌ ಆಪ್‌ನಲ್ಲಿ ಹಾಜರಿ ಬೀಳುವುದಿಲ್ಲ. ಇದರಿಂದ ಸ್ವಯಂಪ್ರೇರಿತವಾಗಿ ಕಾರ್ಮಿಕರು ಮುಂದೆ ಬಂದು ಇ-ಕೆವೈಸಿ ಅಪಡೇಟ್ ಮಾಡಿಸಿಕೊಳ್ಳಬೇಕು. ಅ.31ಕೊನೆ ದಿನವಾಗಿದೆ”.-ಪಂಡಿತ್ ಸಿಂಧೆ, ಸಹಾಯಕ ನಿರ್ದೇಶಕ ನರೇಗಾ ಚಿತ್ತಾಪುರ.

Spread the love

Leave a Reply

Your email address will not be published. Required fields are marked *

You missed

error: Content is protected !!