ಇಂಗಳಗಿ ಮನರೇಗಾ ವಿಶೇಷ ಗ್ರಾಮ ಸಭೆ:
ರೂ. 2 ಕೋಟಿ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯೆ ಯೋಜನೆಗೆ ಅಸ್ತು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮನರೇಗಾ ಯೋಜನೆಯಡಿ ರಸ್ತೆ ಕಾಮಗಾರಿ, ಒಳಚರಂಡಿ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಟ್ಟಡ, ಮಹಿಳಾ ಶೌಚಲಾಯ, ಆಟದ ಮೈದಾನ, ರಸ್ತೆ ಕಾಮಗಾರಿ ಸೇರಿದಂತೆ ಸುಮಾರು ರೂ.2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಸಮಗ್ರ ಸಹಭಾಗಿತ್ವದ ವಾರ್ಷಿಕ ಕ್ರಿಯಾ ಯೋಜನೆಗೆ ಗ್ರಾಮ ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.
ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ ಮನರೇಗಾ ವಿಶೇಷ ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುದ್ರು ಸಾಹು ಅಳ್ಳೋಳ್ಳಿ ಮಾತನಾಡಿ, ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ಬರುವ ಕಾಮಗಾರಿಗಳ ಪಟ್ಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಬರುವ ಒಂದು ವರ್ಷದವರೆಗೆ ಮಾತ್ರ ಈ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಇದರಿಂದ ಜನರು ತಮಗೆ ಬೇಕಾದ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕುರಿ ದೊಡ್ಡಿ, ದನದ ದೊಡ್ಟಿ, ಹೂ ತೋಟ ಮತ್ತು ಸಮುದಾಯ ಕಾಮಗಾರಿಗಳನ್ನು ಕೂಡ ಈ ಯೋಜನೆಯಡಿ ತೆಗೆದುಕೊಳ್ಳಬಹುದಾಗಿದೆ ಎಂದು ಪಿಡಿಓ ತಿಳಿಸಿದರು.
ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಬೇಕು. ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ, ಸ್ತ್ರೀಶಕ್ತಿ ಭವನ, ಒಳಚರಂಡಿ ನಿರ್ಮಾಣ, ಶಹಾಬಾದ್ ರಸ್ತೆ ಬದಿಯಲ್ಲಿ ಸಸಿ ನೆಡವುದು, ವೈಯಕ್ತಿಕ ಶೌಚಾಲಯ ನಿರ್ಮಾಣ, ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಮನರೇಗಾ ಕಾರ್ಮಿಕರಿಗೆ ಕೆಲಸ ನೀಡುವ ಸಲುವಾಗಿ ಕಾಗಿಣಾ ನದಿಯಲ್ಲಿ ಹುಳೇತ್ತುವುದಕ್ಕೆ ರೂ. 1 ಕೋಟಿ ವೆಚ್ಚದ ಕಾಮಗಾರಿ ಯೋಜನೆ ರೂಪಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಟೀಕರ್, ಉಪಾಧ್ಯಕ್ಷೆ ದ್ರೌಪತಿ ಕೊಡ್ಲಿ, ಪಿಡಿಓ ರುದ್ರುಸಾಹು ಅಳ್ಳೋಳಿ, ಕಾರ್ಯದರ್ಶಿ ಸಂಗಮೇಶ ಹೀರೆಮಠ, ಬಿಲ್.ಕಲೆಕ್ಟರ್ ರವಿ ಅಳ್ಳೋಳಿ, ಎಸ್.ಡಿ.ಎ ಸಿದ್ರಾಮಪ್ಪ ಭಂಕೂರ್. ಉದಯ ಅಳ್ಳೋಳಿ, ಕಾಯಕ ಮಿತ್ರ ಗಿಡ್ಡಮ್ಮ ಪವಾರ್, ಸದಸ್ಯರಾದ ಗೌಸ್ ದುದ್ದನಿ, ಕಾಶಿನಾಥ್ ಚನ್ನಗುಂಡ, ಶರಣು ರಾವೂರಕರ್ ಮತ್ತು ವೆಂಕಟಗಿರಿ ಕಟ್ಟಿಮನಿ, ಶಾಂತಪ್ಪ ಕೊಡ್ಲಿ, ಶೇಖಮ್ಮ, ಮಲ್ಲಪ್ಪ ನಾಟೀಕಾರ ಇದ್ದರು.