ಚಿತ್ತಾಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ | ಇಬ್ಬರಿಗೆ ಕಡಿತ, ಸರ್ಕಾರಿ ಆಸ್ಪತ್ರೆಗೆ ದಾಖಲು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ವಾರ್ಡ್ ನಂ.17 ರ ಚೌಡಮ್ಮ ದೇವಸ್ಥಾನದ ಹತ್ತಿರ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಇಬ್ಬರ ಮೇಲೆ ದಾಳಿ ಮಾಡಿದ ನಾಯಿ ಕೈ ಕಾಲಿಗೆ ಕಚ್ಚಿದ ಘಟನೆ ನಡೆದಿದ್ದು, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದಲ್ಲಿ ಗುಂಪು ಗುಂಪಾಗಿ ಸಂಚರಿಸುವ ಶ್ವಾನಗಳನ್ನು ಕಂಡು ಭಯದಿಂದ ಓಡಾಟ ನಡೆಸುವ ಆತಂಕ ಎದುರಾಗಿದೆ. ಬೀದಿ ನಾಯಿಗಳು ಎಷ್ಟೋ ಬಾರಿ ರಾತ್ರಿ ಸಮಯ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬರುವುದರಿಂದ ಅಪಘಾತ ಸಂಭವಿಸುತ್ತಿವೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಬೀದಿ ನಾಯಿಗಳ ಕಡಿವಾಣಕ್ಕೆ ಆದೇಶಿಸಿದೆ ಆದರೂ ಸ್ಥಳೀಯ ಪುರಸಭೆ ಆಡಳಿತ ಯಾವುದೇ ನಿಯಂತ್ರಣಕ್ಕೆ ಮುಂದಾಗಿಲ್ಲ.
ಬೀದಿ ನಾಯಿಗಳ ಕಡಿತಕ್ಕೆ ಒಳಗಾದವರಿಗೆ ಪುರಸಭೆ ವತಿಯಿಂದಲೇ ಚಿಕಿತ್ಸೆ ನೀಡಬೇಕು ಹಾಗೂ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ಪಟ್ಟಣದ ಜನತೆಯಲ್ಲಿ ಮನೆಮಾಡಿದ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೀದಿ ನಾಯಿಗಳ ಕಡಿವಾಣಕ್ಕೆ ಪುರಸಭೆ ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

