ಬಸವ ನಗರದ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಪೋಷಕ ಶಿಕ್ಷಕರ ಮಹಾಸಭೆ | ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಿಸಿ ಉಳಿಸಿ ಬೆಳೆಸಬೇಕಿದೆ: ಮಲ್ಲಿಕಾರ್ಜುನ ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕ ಶಿಕ್ಷಕರ ಮಹಾಸಭಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಕಲಿಕೆಗೆ ಸರ್ಕಾರ ಇಂದು ಸಮವಸ್ತ್ರ, ಪಠ್ಯ ಪುಸ್ತಕ, ಶೂ ಸಾಕ್ಸ್, ಬಿಸಿಯೂಟ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದೆ, ಹೀಗಾಗಿ ಪಾಲಕರು ಮಕ್ಕಳನ್ನು ನಿತ್ಯ ಶಾಲೆಗೆ ಕಳುಹಿಸಿ ಅವರಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ನಿರ್ಮಾಣ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಣದಲ್ಲಿ ಬಸವ ನಗರದ ಶಾಲೆ ಮಕ್ಕಳ ದಾಖಲಾತಿಗೆ ವಿಶೇಷ ಕಾಳಜಿ ವಹಿಸಿದ ಏಕೈಕ ಶಾಲೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು. ಇಲ್ಲಿನ ಶಿಕ್ಷಕರು ಬಹಳ ಮುತುವರ್ಜಿ ವಹಿಸಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿಗೆ ಪಾಲಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ, ಹೀಗಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಪಡೆದು ತಾಲೂಕಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಸಿಆರ್’ಸಿ ಕವಿತಾ ದೊಡ್ಡಮನಿ ಮಾತನಾಡಿ, ಎಲ್ಲರೂ ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಸದುದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ, ಹೀಗಾಗಿ ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದು ತಂದೆತಾಯಿಗೆ ಹಾಗೂ ಕಲಿಸಿದ ಶಾಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಬಿಆರ್’ಪಿ ಜೈಶೀಲಾ ಆಂದೋಲಾ, ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ, ನಿವೃತ್ತ ಶಿಕ್ಷಕರಾದ ಮಲ್ಲಣ್ಣ ಮಾಸ್ಟರ್ ಮುಡಬೂಳ, ದೇವಪ್ಪ ನಂದೂರಕರ್ ಅವರು ಮಾತನಾಡಿದರು.
ಮುಖ್ಯಗುರು ವೀರಸಂಗಪ್ಪ ಸುಲೇಗಾಂವ, ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಲಾಲಬೀ ದಿಗ್ಗಾಂವ, ಸಹಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ, ಅತಿಥಿ ಶಿಕ್ಷಕರಾದ ಪೂರ್ಣಿಮಾ, ನಾಗೇಶ್, ಎಲ್.ಎಲ್.ಎಫ್ ಶಿಕ್ಷಕಿ ಮಲ್ಲಮ್ಮ ಸೇರಿದಂತೆ ಅಡುಗೆ ಸಿಬ್ಬಂದಿಗಳು, ಪಾಲಕ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀದೇವಿ ಕೋಬಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

