ವಾಡಿ ಕಟ್ಟಡ ಕಾರ್ಮಿಕರ ಸಂಘದ ಸಭೆ | ಕಾರ್ಮಿಕರ ಹೆಸರಲ್ಲಿ ಲೂಟಿ ಹೊಡೆಯುತ್ತಿರುವ ಕಾರ್ಮಿಕ ಇಲಾಖೆ ವಿರುದ್ಧ ಹೋರಾಡಲು ಒಗ್ಗೂಡಿ: ದೇವದಾಸ್
ನಾಗಾವಿ ಎಕ್ಸಪ್ರೆಸ್
ವಾಡಿ: ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ, ಆರೋಗ್ಯ ತಪಾಸಣೆ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಕಾರ್ಮಿಕ ಇಲಾಖೆ ವಿರುದ್ಧ ಹೋರಾಟವನ್ನು ರೂಪಿಸಲು ಕಟ್ಟಡ ಕಾರ್ಮಿಕರು ಒಗ್ಗೂಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎ. ದೇವದಾಸ್ ಕರೆ ನೀಡಿದರು.
ಪಟ್ಟಣದ ಜಾಂಭವೀರ ಕಾಲೋನಿಯ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಎಐಟಿಯುಸಿ ಕಾರ್ಮಿಕ ಸಂಘಟನೆಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವಾಡಿ ಸ್ಥಳೀಯ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಬಹುತೇಕ ಸೌಲಭ್ಯಗಳು ಕಡಿತವಾಗುತ್ತಿದೆ. ಟೂಲ್ ಕಿಟ್ ಹೆಸರಿನಲ್ಲಿ ಸರ್ಕಾರ ಹಣ ದುರ್ಬಳಕೆ ಮಾಡುತ್ತಿದೆ. ಕಾರ್ಮಿಕರಿಗೆ ಶೈಕ್ಷಣಿಕ ಸಹಾಯದನ, ಹೆರಿಗೆ ಸಹಾಯಧನ, ಆರೋಗ್ಯ ಸಹಾಯಧನ, ಪಿಂಚಣಿ ಸಹಾಯಧನ, ಅಪಘಾತ ಪರಿಹಾರಧನ, ಮಧುವೆ ಸಹಾಯ ಧನ ಹೆಚ್ಚಳ ಮಾಡುವುದನ್ನು ಬಿಟ್ಟು ಸರ್ಕಾರ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ, ಆರೋಗ್ಯ ತಪಾಸಣೆ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ ಎಂದು ಹೇಳಿದರು.
ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ದೊರೆಯದೆ ಇರುವುದು ದುರಂತ. ಹೊಸ ಹಾಗೂ ನವೀಕರಣ ಅರ್ಜಿ ಸಲ್ಲಿಸಲು ಹಲವಾರು ಬದಲಾವಣೆಗಳನ್ನು ಮಂಡಳಿಯಿಂದ ಮಾಡಿದ್ದಾರೆ. ಕಾಲಕಾಲಕ್ಕೆ ಬದಲಾವಣೆ ಮಾಡಿ ಲೇಬರ್ ಕಾರ್ಡ್ ಕೇವಲ ಒಂದು ವರ್ಷಕ್ಕೆ ಮಾತ್ರ ಅವಧಿ ನಿಗದಿ ಮಾಡಿರುವುದನ್ನು ನಿಲ್ಲಿಸಬೇಕು. ಲೇಬರ್ ಕಾರ್ಡಿನ ಚಾಲ್ತಿ ಅವಧಿಯನ್ನು 3 ವರ್ಷಕ್ಕೆ ಹೆಚ್ಚಿಸಬೇಕು. ಶೈಕ್ಷಣಿಕ ಸಹಾಯಧನ, ಹೆರಿಗೆ ಸಹಾಯಧನ, ಮರಣ ಸಹಾಯಧನ, ವಿವಾಹ ಸಹಾಯಧನ ಹೆಚ್ಚಿಸಬೇಕು ಹಾಗೂ ಬಾಕಿ ಇರುವ ಅರ್ಜಿಗಳನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಎಸ್. ಎಮ್. ಶರ್ಮಾ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಚಿತ್ತಾಪುರ ತಾಲೂಕ ಸಂಚಾಲಕ ಶರಣು ಹೇರೂರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಕಟ್ಟಡ ಕಾರ್ಮಿಕರಾದ ಸೈಫನ್ ತಂಬೋಲಿ, ಖದಿರ್ ಶಹಾಬಾದ್, ಶರಣಪ್ಪ ಚಿತ್ತಾಪುರಕರ್, ಧನರಾಜ್ ಕರಕಳ್ಳಿ, ಜೋನ್ ಆನಂದ್, ತಿಪಣ್ಣ ವಿಜಯನಗರ, ಭೀಮರಾಯ ಕಡಬುರ್, ಶ್ರೀಶೈಲ್ ಕೆಂಚಗುಂಡಿ, ಅಲ್ಲಾವುದ್ದಿನ್, ಅಭಿಷೇಕ್, ಮಲ್ಲೇಶ್, ರೇಣುಕಾ, ಕಾಳಮ್ಮ, ಪಾರ್ವತಿ, ಬಸಲಿಂಗಪ್ಪ ಮುಂಡರ್ಗಿ, ಮಹಾಂತೇಶ್ ಮಾಲಗತ್ತಿ ಉಪಸ್ಥಿತರಿದ್ದರು. ವಾಡಿ ಘಟಕ ಕಾರ್ಯದರ್ಶಿ ಚಂದ್ರಕಾಂತ್ ಪಗಲಾಪುರ್ ನಿರೂಪಿಸಿ ವಂದಿಸಿದರು.

