Oplus_0

ಕೋಲಿ ಕಬ್ಬಲಿಗ ಎಸ್.ಟಿ ಪ್ರಸ್ತಾವನೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಕಳಿಸಲು ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ : ಕೋಲಿ, ಕಬ್ಬಲಿಗ, ಕಬ್ಬೇರ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂದು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ್, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ್ ಅವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನ ಸಮಯದಲ್ಲಿ ತಾಲ್ಲೂಕು ಕೋಲಿ ಸಮಾಜದ ಮುಖಂಡರು ಸಚಿವರನ್ನು ಭೇಟಿ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ಮನವಿ ಮಾಡಿಕೊಂಡಾಗ, ಸಚಿವರು ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ ಮತ್ತು ಕೋಲಿ, ಕಬ್ಬಲಿಗ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸುವ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರದಿಂದ ವಾಪಸು ಬಂದಿರುವ ಎಸ್.ಟಿ ಕಡತದ ಬಗ್ಗೆ ಅಧ್ಯಯನ ಮಾಡಿ ಸಮರ್ಥ ದಾಖಲೆಗಳನ್ನು ಸಲ್ಲಿಸಿ. ಎಸ್.ಟಿ ಬೇಡಿಕೆಯ ಕುರಿತು ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ. ನಿಮ್ಮ ಮನವಿಯ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮರ್ಥವಾದ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಚಿವರು ಆಶ್ವಾಸನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಷ್ಟು ಬೇಗ ಸಮಾಜದಿಂದ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸುತೀರೋ ಅಷ್ಟು ಬೇಗ ಅದಕ್ಕೆ ಬೇಕಾದಂತಹ ವರದಿ ಸಿದ್ದಪಡಿಸಿಕೊಂಡು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು. ವಿಳಂಬ ಮಾಡದೇ ಮನವಿ ಮತ್ತು ದಾಖಲೆ ಸಲ್ಲಿಸಿ ಎಂದು ಸಚಿವರು ಮಾರ್ಗದರ್ಶನ ಮಾಡಿದ್ದಾರೆ. ತಾಲ್ಲೂಕು ಕೋಲಿ, ಕಬ್ಬಲಿಗ ಸಮಾಜದ ಮುಖಂಡರ ನಿಯೋಗವು ಶೀಘ್ರದಲ್ಲಿ ಬೆಂಗಳೂರಿಗೆ ತೆರಳಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ ಹಾಗೂ ಅವರ ನೇತೃತ್ವದಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೋಲಿ, ಕಬ್ಬಲಿಗ ಜಾತಿಗಳು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು ಸಮಾಜದ ಯಾರೊಬ್ಬರೂ ಸರ್ಕಾರಕ್ಕೆ ಸಮರ್ಥ ದಾಖಲೆ ಸಲ್ಲಿಸದೆ ಕೇವಲ ಭಾಷಣ ಮಾಡುತ್ತ, ಹೇಳಿಕೆ ನೀಡುತ್ತಾ ಸಮಾಜದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಎಸ್.ಟಿ ವಿಷಯ ಸಾಮಾಜಿಕ ಕಳಕಳಿಗಿಂತ ರಾಜಕೀಯ ವಿಷಯವಾಗಿ ಬಳಕೆಯಾಗುತ್ತಿದೆ. ಸರ್ಕಾರಕ್ಕೆ ಮನವಿ ಸಲ್ಲಿಸದೆ ಮತ್ತು ಸೂಕ್ತ ದಾಖಲೆ ಸಲ್ಲಿಸದೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತ ಮಾಡಿದ್ದಾರೆ.

ಕಳೆದ 2020 ರಲ್ಲಿ ಕೇಂದ್ರ ಸರ್ಕಾರವು ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಿತ್ತು. ನಂತರ ರಾಜ್ಯದಲ್ಲಿ ತಳವಾರ ಜನರಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಗೊಂದಲ ಉಂಟಾಗಿತ್ತು. ನಮ್ಮ ಸಹೋದರ ಸಮಾಜವಾದ ತಳವಾರ ಜಾತಿಯ ಜನರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಮನಗಂಡು, ತಳವಾರ ಜನರಿಂದ ಮಾಹಿತಿ ಪಡೆದುಕೊಂಡು ಸಮಸ್ಯೆಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಸಭೆ ಆಯೋಜಿಸಿ, ರಾಜ್ಯ ಸರ್ಕಾರದಿಂದ ಹೊಸದಾಗಿ ಆದೇಶ ಹೊರಡಿಸುವುದಕ್ಕೆ ಸಚಿವ ಪ್ರಿಯಾಂಕ್ ಅವರ ಅವಿರತ ಶ್ರಮವಿದೆ ಮತ್ತು ತಳವಾರ ಜನಾಂಗದ ಕಳಕಳಿಯಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!