ನಾಲವಾರ ಜಾತ್ರೆ-2026: ಸಾಂಸ್ಕೃತಿಕ ವೈಭವಕ್ಕೆ ಚಾಲನೆ | ಕಡಕೋಳ ಮಡಿವಾಳೇಶ್ವರರ ಪುರಾಣ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳದ ಶ್ರೀ ಮಡಿವಾಳೇಶ್ವರರ ಪುರಾಣ ಪ್ರಾರಂಭೋತ್ಸವ, ಜಾತ್ರಾ ಮಹೋತ್ಸವದ ಭಿತ್ತಿ ಪತ್ರಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಚಾಲನಾ ಸಮಾರಂಭವು ಗುರುವಾರ ಅತ್ಯಂತ ಅದ್ಧೂರಿಯಾಗಿ ನೆರವೇರಿತು.
ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಕರಡಕಲ್ಲ ಶ್ರೀ ಕೋರಿಸಿದ್ಧೇಶ್ವರ ಶಾಖಾ ಮಠದ ಪೂಜ್ಯ ಶಾಂತರುದ್ರಮುನಿ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ನಾಡಿನ ಪ್ರಖರ ಪ್ರವಚನಕಾರರೆಂದೇ ಪ್ರಖ್ಯಾತರಾದ ಸಿದ್ಧಬಸವಕಬೀರ ಮಹಾಸ್ವಾಮಿಗಳು ಮರುಳಶಂಕರ ಪೀಠ ಚಿಗರಹಳ್ಳಿ ಅವರು ತತ್ವಪದಕಾರ, ಶ್ರೇಷ್ಠ ಶರಣ ಕಡಕೋಳದ ಮಡಿವಾಳೇಶ್ವರರ ಪುರಾಣ ಪ್ರವಚನ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನಾಲವಾರ ಜಾತ್ರೆ ಕೇವಲ ಧಾರ್ಮಿಕ ಯಾತ್ರೆ ಮಾತ್ರವಾಗಿರದೇ, ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಂಗಮವಾಗಿದ್ದು, ಇಡೀ ನಾಡು ನಾಲವಾರದ ಜಾತ್ರೆಯ ವಿಶೇಷತೆಯೇನು ಎಂಬುದನ್ನು ಪ್ರತಿವರ್ಷ ಕುತೂಹಲದಿಂದ ಎದುರುನೋಡುತ್ತದೆ.
ಹತ್ತಾರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಜ. 18-19 ರಂದು ತನ್ನ ವೈಭವವನ್ನು ತಲುಪುತ್ತದೆ. ಜಾತ್ರೆಯು ಮನುಷ್ಯರ ಮನಸ್ಸುಗಳನ್ನು ಬೆಸೆಯುವ ಸಾಧನವಾಗಿದ್ದು, ಬೇಧ ಭಾವವನ್ನು ಮರೆತು ಎಲ್ಲರೂ ಒಟ್ಟಾಗಿ ಸಂಭ್ರಮಿಸುವ ಸಡಗರದ ಹಬ್ಬವೆಂದರೆ ನಾಲವಾರ ಜಾತ್ರೆಯಾಗಿದೆ ಎಂದು ಬಣ್ಣಿಸಿದರು.
ಜನೆವರಿ 18 ರಂದು ಭಕ್ತರ ಹರಕೆಯ ತನಾರತಿ ಮಹೋತ್ಸವ ಹಾಗೂ 19 ರಂದು ಮಹಾರಥೋತ್ಸವ ಕಾರ್ಯಕ್ರಮಗಳು ಅತಿವೈಭವದಿಂದ ನಡೆಯಲಿವೆ. ನಾಡಿನ ಹರಗುರು ಚರಮೂರ್ತಿಗಳು ಹಾಗೂ ಗಣ್ಯರು ಭಾಗವಹಿಸುವ ನಾಲವಾರ ಜಾತ್ರೆಗೆ ನಾಡಿನ ಭಕ್ತಸಂಕುಲ ಆಗಮಿಸಬೇಕೆಂದು ಪೂಜ್ಯರು ಕರೆ ನೀಡಿದರು.
ಪೂಣಕುಂಭ ಹೊತ್ತ ನೂರಾರು ಮಹಿಳೆಯರೊಂದಿಗೆ ಪೂಜ್ಯರ ಹಾಗೂ ಪುರಾಣದ ಮೆರವಣಿಗೆ ಶ್ರೀಮಠಧ ಅಂಗಳದಲ್ಲಿ ಅದ್ಧೂರಿಯಾಗಿ ನಡೆಯಿತು.
ವೇದಿಕೆಯ ಮೇಲೆ ಶ್ರೀಮಠದ ಸದ್ಭಕ್ತರಾದ ಸಂಗಾರೆಡ್ಡಿಗೌಡ ಮಲ್ಹಾರ ಯಾಧಗಿರಿ, ವಿರುಪಾಕ್ಷಯ್ಯ ಸ್ವಾಮಿ, ಮಹಾದೇವ ಗಂವ್ಹಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವಕ್ಕಾಗಿ ಹಲವು ಭಕ್ತರು ಕಾಣಿಕೆ ಸಮರ್ಪಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು. ಗಾಯಕ ಸಿದ್ದಯ್ಯ ಸ್ವಾಮಿ ಪಡದಳ್ಳಿ ಸಂಗೀತ ಕಾಯಕ್ರಮ ನಡೆಸಿಕೊಟ್ಟರು. ಶ್ರೀಮಠದ ಪ್ರಸಾದ ನಿಲಯದ ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು.

