ಭಾಗೋಡಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ | ಕೋಲಿ ಸಮಾಜದ ಐದು ಪರ್ಯಾಯ ಪದಗಳು ಎಸ್ಟಿ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ: ಎಂಎಲ್ಸಿ ಕಮಕನೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕದಲ್ಲಿ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವ ಪ್ರಸ್ತಾವನೆಯಲ್ಲಿ ಬಳಸಲಾದ ಐದು ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ ಕೇಂದ್ರಕ್ಕೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಿ ಸಮಾಜದ ಐದು ಪರ್ಯಾಯ ಪದಗಳು ಎಸ್ಟಿ ಗೆ ಸೇರಿಸುವ ಪ್ರಯತ್ನಕ್ಕೆ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಕೈಜೋಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ, ಹೀಗಾಗಿ ಕೆಲವೇ ದಿನಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಹೇಳಿದರು.
ಕಲಬುರಗಿ ನಗರದ ಮಹಾತ್ಮ ಗಾಂಧಿ ಹಾಗೂ ಬಾಬು ಜಗಜೀವನರಾಮ್ ಮೂರ್ತಿಗಳ ನಡುವೆ ಬೃಹತ್ ಪ್ರಮಾಣದ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಈಗಾಗಲೇ ಕ್ಯಾಬಿನೆಟ್ ಅನುಮತಿ ನೀಡಿದೆ ಹಾಗೂ ಮಹಾನಗರ ಪಾಲಿಕೆಯಲ್ಲಿ ಇದಕ್ಕೆ 40 ಲಕ್ಷ ಅನುದಾನ ಮೀಸಲಿಡಲಾಗಿದೆ ಹೀಗಾಗಿ ಎರಡು ತಿಂಗಳಲ್ಲಿ ಮೂರ್ತಿ ಸ್ಥಾಪನೆ ಆಗಲಿದೆ ಎಂದು ಹೇಳಿದರು. ಬೆಂಗಳೂರು ವಿಧಾನಸೌಧ ಎದುರುಗಡೆ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಈಗಾಗಲೇ ಅಧಿವೇಶನದಲ್ಲಿ ಹಲವು ಬಾರಿ ಚರ್ಚೆ ಮಾಡಿದ್ದು ಇದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಸೇರಿದಂತೆ 75 ಸದಸ್ಯರು ಬೆಂಬಲ ಸೂಚಿಸಿದ್ದು, ಅತೀ ಶೀಘ್ರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದರು.
ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಮ್ಮತಿ: ಕಲ್ಯಾಣ ಕರ್ನಾಟಕ ಭಾಗದ ಮಹಿಯೋಗಿನಿ ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಈಗಾಗಲೇ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದ್ದು ಸರ್ಕಾರ ಸಮ್ಮತಿ ನೀಡಿದೆ. ಇದಕ್ಕೆ 200 ಕೋಟಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಐಕ್ಯ ಸ್ಥಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಸರ್ಕಾರದ ಭರವಸೆ: ಕೂಡಲ ಸಂಗಮ ಮಾದರಿಯಲ್ಲಿ ಅಂಬಿಗರ ಚೌಡಯ್ಯ ಐಕ್ಯ ಸ್ಥಳ ಅಭಿವೃದ್ಧಿಗೆ 50 ಕೋಟಿ ಅನುದಾನ ನೀಡಿ ಪ್ರಾಧಿಕಾರ ರಚನೆಗೆ ಒತ್ತಡ ಹೇರಲಾಗಿದ್ದು, ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ ಹೀಗಾಗಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಎಲ್ಲರೂ ಒಗ್ಗೂಡಿ ಗಟ್ಟಿಯಾಗಿದ್ದಾಗ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ, ಹೀಗಾಗಿ ಕೋಲಿ ಸಮಾಜದವರು ಸಾಮಾಜಿಕ ನ್ಯಾಯ ಪಡೆಯಲು ಒಗ್ಗೂಡಿ, ನಾನು ಸಮಾಜದ ಋಣ ತೀರಿಸಲು ಕೊನೆಯ ಉಸಿರು ಇರುವವರೆಗೂ ಹೋರಾಡಲು ಸಿದ್ದ ಎಂದರು.
ತೊನಸನಳ್ಳಿ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು, ಗುರುಮಠಕಲ್ ಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಮಹಾಸ್ವಾಮಿಗಳು, ಪೂಜ್ಯ ಪರಶುರಾಮ ಮುತ್ಯಾ ಭಾಗೋಡಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ, ಮಲ್ಲಿಕಾರ್ಜುನ ಅಲ್ಲೂರಕರ್, ಶರಣಪ್ಪ ನಾಟೀಕಾರ, ರಾಜೇಶ್ ಹೋಳಿಕಟ್ಟಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಹಾಂತಗೌಡ ಎಸ್. ಪಾಟೀಲ ಅವರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಉದ್ಯಮಿ ಶಿವರಾಯ ಕಮಕನೂರ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ, ಉದ್ಯಮಿ ಯಲ್ಲಾಲಿಂಗ ಪೂಜಾರಿ, ಹಸನ್ ಪಟೇಲ್, ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಮಕನೂರ, ಪ್ರೊ.ಮಲ್ಲಪ್ಪ ಮಾನೇಗಾರ, ವಿಠಲ್ ತಾತಾ, ವೀರಯ್ಯ ಗುತ್ತೇದಾರ, ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ, ಬಸವರಾಜ ಪೂಜಾರಿ, ಶರಣಗೌಡ ಪಾಟೀಲ, ಗುಂಡು ಐನಾಪೂರ, ದೇವಿಂದ್ರ ಅರಣಕಲ್, ಗುರುನಾಥ ಗುದಗಲ್, ತಮ್ಮಣ್ಣ ಡಿಗ್ಗಿ, ಆಂಜನೇಯ ಜೀವಣಗಿ, ದೇವರಾಜ್ ತಳವಾರ, ಬಸವರಾಜ ಹಾಸಬಾ, ಶಿವಯೋಗಿ ನಾಟೀಕಾರ, ಸಂತೋಷ ಇವಣಿ, ಶರಣು ಡೋಣಗಾಂವ, ಇಂದುಶೇಖರ ಬೆಂಕಿ, ಬೋಜು ಶೇರಿ, ರಾಮಲಿಂಗ ಬಾನರ್, ಮಂಜುನಾಥ ಸಣ್ಣೂರಕರ್, ಮಲ್ಲಿಕಾರ್ಜುನ ನಾಯ್ಕೋಡಿ, ಕರಣು ಅಲ್ಲೂರ, ದೇವು ಯಾಬಾಳ, ಸುರೇಶ್ ಗುತ್ತೇದಾರ, ತಿಪ್ಪಣ್ಣ ಇವಣಿ, ಅಂಬು ಹೋಳಿಕಟ್ಟಿ, ದೇವಿಂದ್ರಪ್ಪ ಗುಡ್ಡಾಪುರ, ಮುತ್ತಣ್ಣ ಶಿರೂರು, ಫಕೀರಪ್ಪ ಕದ್ದರಗಿ ಅವರು ವೇದಿಕೆಯಲ್ಲಿದ್ದರು. ಕೋಲಿ ಸಮಾಜ ಹಿರಿಯ ಮುಖಂಡ ರಾಜೇಂದ್ರಪ್ಪ ಅರಣಕಲ್ ಅಧ್ಯಕ್ಷತೆ ವಹಿಸಿದ್ದರು.
ಕೋಲಿ ಸಮಾಜದ ಭಾಗೋಡಿ ಅಧ್ಯಕ್ಷ ದೇವಿಂದ್ರ ಹಾಸಬಾ ದೇವಿಂದ್ರ ಡೋಣಗಾಂವ, ನಾಗರಾಜ ಬೆಣ್ಣೂರ, ಶರಣಪ್ಪ ಹಾಸಬಾ, ಕಾಮೇಶ್ ಹಾಸಬಾ, ಮರೆಪ್ಪ ಭಂಗಿ, ಮಣಿಗೀರಿ ಅಗಸಿ, ಸಾಗರ ಬಿಚ್ಚಾ, ಶರಣು ಬೆಣ್ಣೂರ, ಅರ್ಜುನ್ ನಾಟೀಕಾರ, ಮಾರುತಿ ದುಗನೂರ, ಸಂತೋಷ ನದಿಮುಲ್, ನಾಗರಾಜ ಹಾಸಬಾ, ಕಾಶಿನಾಥ ಭಂಗಿ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಎಮ್ಮೆನೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣು ಅರಣಕಲ್ ಸ್ವಾಗತಿಸಿದರು, ದೇವೇಂದ್ರ ನಾಟೀಕಾರ ನಿರೂಪಿಸಿದರು, ದೇವಿಂದ್ರ ಡೋಣಗಾಂವ ವಂದಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯ ನವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

