Oplus_0

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯಾಗಾರ ಯಶಸ್ವಿ | ಎಸ್ಸೆಸ್ಸೆಲ್ಸಿ ಪರೀಕ್ಷಾ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಬಿರಾದಾರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಬಜಾಜ್ ಕಾಂಪ್ಲೇಕ್ಸ್ ಕೆಳಮಹಡಿಯ ಮಿನಿ ಕಲ್ಯಾಣ ಮಂಟಪದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಚಿತ್ತಾಪುರ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಭಯ ನಿವಾರಣೆ ಕಾರ್ಯಾಗಾರ, ಪರೀಕ್ಷೆ ಹೊಸ್ತಿಲಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ದುಗುಡ, ಗೊಂದಲ, ಅನುಮಾನಗಳಿಗೆ ಉತ್ತರ ಕಲ್ಪಿಸುವಲ್ಲಿ ವೇದಿಕೆಯಾಯಿತು. ಮಾನಸಿಕ ಒತ್ತಡ ನಿರ್ವಹಣೆ, ಪರೀಕ್ಷೆಯೇನು ಮಹಾಯುದ್ಧವಲ್ಲ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಿತು. ಅಲ್ಲದೇ ಪರೀಕ್ಷಾ ಒತ್ತಡ ನಿರ್ವಹಣೆ, ವಿಷಯವಾರು ತಜ್ಞರ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಕುರಿತು ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡುವ ಮೂಲಕ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ಪ್ರೇರೇಪಿಸಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ ಸಾಮಾನ್ಯ. ಈ ಹಿನ್ನೆಲೆಯಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ನವರು ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸಲು ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದು ಉತ್ತಮ ಫಲಿತಾಂಶ ತಂದು ಕೊಡಬೇಕು ಎಂದು ಮನವಿ ಮಾಡಿದರು.

ಯಾವುದೇ ಗೊಂದಲ ಅಥವಾ ಆತಂಕ ಇಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆಗ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ. ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವು ಬಾರದೇ ಇರುವದರಿಂದ ಈ ಸಾಲಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರಿಗೆ ಬೋಧನೆ ಕುರಿತಾಗಿ ಮತ್ತು ಮಕ್ಕಳಿಗೆ ಕಲಿಕೆಯ ಕುರಿತಾಗಿ ಕಾರ್ಯಗಾರಗಳನ್ನು ನಡೆಸಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

ಮಕ್ಕಳು ಮೋಬೈಲ್, ಟಿವಿಯಿಂದ ದೂರವಿದ್ದು ಓದಿನತ್ತ ಹೆಚ್ಚಿನ ಗಮನ ಹರಿಸಬೇಕು ಈ ಪರೀಕ್ಷೆಯು ಮಕ್ಕಳ ಭವಿಷ್ಯಕ್ಕೆ ತಿರುವು ನೀಡುವ ಘಟ್ಟ ಇದಾಗಿದೆ. ಪರೀಕ್ಷೆ ಯುದ್ಧವಲ್ಲ, ಯಾರ ವಿರುದ್ಧದ ಹೋರಾಟವೂ ಅಲ್ಲ. ಭಯ, ಹೋರಾಟ, ಆತಂಕ ಬಿಟ್ಟು ಹಬ್ಬಕ್ಕೆ ತೆರಳುವ ಸಂಭ್ರಮದೊಂದಿಗೆ ಪರೀಕ್ಷೆಗೆ ತೆರಳುವ ಮಾನಸಿಕ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಪರೀಕ್ಷೆ ನಿಮ್ಮನ್ನು ನೋಡಿ ಭಯಪಡಬೇಕು. ಆ ರೀತಿಯಲ್ಲಿ ನಿಮ್ಮ ಅಧ್ಯಯನ ಇರಬೇಕು ಎಂದು ಕಿವಿಮಾತು ಹೇಳಿದರು.

ಪಿಎಸ್‌ಐ ಮಂಜುನಾಥ ರೆಡ್ಡಿ ಪರೀಕ್ಷಾ ಟಿಪ್ಸ್ ಬಿಡುಗಡೆಗೊಳಿಸಿ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಪ್ರತಿಯೊಬ್ಬರೂ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯ‌ದ ಮೇಲೆ ನಂಬಿಕೆ ಇರಲಿ ಎಂದು ಹೇಳಿದರು.

ತಂದೆ ತಾಯಿ ಅವರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ತಮ್ಮ ಕಷ್ಟಗಳನ್ನು ಲೆಕ್ಕಿಸದೆ ಮಕ್ಕಳ ಓದಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಈಗ ನಾವು ಸ್ಪರ್ಧಾತ್ಮಕ ಯುಗದಲ್ಲಿವೆ. ಇಲ್ಲಿ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳಿಗೆ ಮಹತ್ವವಿಲ್ಲ ಏನಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಂಕಗಳೇ ಮುಖ್ಯವಾಗಿದೆ. ಅದಕ್ಕಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದು ಬಿಟ್ಟು ಬೇರೆ ಯಾವುದರ ಕಡೆ ಗಮನ ನೀಡಬಾರದು. ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿನ ಆತಂಕವನ್ನು ಕಡಿಮೆ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಹಾಯ ಮಾಡುತ್ತವೆ ಎಂದರು.

ಶಿಕ್ಷಣ‌ ತಜ್ಞ ಕೆ.ಎಂ.ವಿಶ್ವನಾಥ ‘ಪರೀಕ್ಷೆ ಒಂದು ಹಬ್ಬದಂತೆ ಸಂಭ್ರಮಿಸಿ‌ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಭಯ ಬಿಟ್ಟು ಪರೀಕ್ಷೆಯನ್ನು ಹಬ್ಬವಾಗಿ ಸಂಭ್ರಮಿಸಿ ಎಂದು  ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ನಾನು ಎಲ್ಲವೂ ಓದಿದ್ದೇನೆ, ನನಗೆ ಎಲ್ಲಾ ವಿಷಯವು ಗೊತ್ತಿದೆ, ನನಗೆ ಪರೀಕ್ಷೆ ಎದುರಿಸಲು ಯವುದೇ ಭಯವಿಲ್ಲ ಎಂಬ ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಿ. ಈ ರೀತಿ ಆದಲ್ಲಿ ಓದಿದ ವಿಷಯಗಳು ಜ್ಞಾಪಕದಲ್ಲಿ ಉಳಿಯುವ ಜತೆಗೆ ಪರೀಕ್ಷೆ ಬರೆಯುವಾಗ ತಟ್ಟನೆ ಹೊಳೆಯುತ್ತವೆ ಎಂದರು.

ಪರೀಕ್ಷೆ ಕುರಿತು ನಿಮ್ಮ ಮನಸಿನಲ್ಲಿ ಮೂಡಿರುವ ಭಯ ಹೊರ ಹಾಕಿ. ಕೊನೇ ಘಳಿಗೆಯಲ್ಲಿ ಅನಗತ್ಯ ಒತ್ತಡಕ್ಕೆ ಒಳಗಾಗುವುದರ ಬದಲು ಧೈರ್ಯದಿಂದ ಇರಿ. ಇದುವರೆಗೆ ಓದಿದನ್ನು ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.

ಇಂಗಳಗಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಬಸಪ್ಪ ಮುಗಳಖೋಡ ಇಂಗ್ಲೀಷ್ ವಿಷಯ ಕುರಿತು ಮಾತನಾಡಿ, ಎಲ್ಲಾ ವಿಷಯಗಳಲ್ಲಿ ಇಂಗ್ಲಿಷ್ ಸರಳವಾದ ವಿಷಯವಾಗಿದೆ ಹೀಗಾಗಿ ಯಾರೂ ಹೆದರುವ ಅಗತ್ಯವಿಲ್ಲ ಎಂದು ಮಕ್ಕಳಲ್ಲಿ ದೈರ್ಯ ತುಂಬಿದ ಅವರು ಸರಳವಾಗಿ 60 ಅಂಕ ಪಡೆಯುವ ವಿಧಾನ ಮನಮುಟ್ಟುವ ಹಾಗೆ ತಿಳಿಸಿದರು.

ರಾವೂರ ಕೆಪಿಎಸ್ ಶಾಲೆಯ ಸಹ ಶಿಕ್ಷಕ ಉದಯಕುಮಾರ ಇಂಗಳೆ ಗಣಿತ ವಿಷಯ ಕುರಿತು ಮಾತನಾಡಿ, ಗಣಿತವನ್ನು ಕಬ್ಬಿಣದ ಕಡಲೆ ಎಂದು ಕರೆಯುತ್ತಾರೆ. ಹಾಗಂದ ಮಾತ್ರಕ್ಕೆ ಅಷ್ಟೊಂದು ಕಠಿಣ ಸಬ್ಜೆಕ್ಟ್‌ ಇದಲ್ಲ. ಆದ್ದರಿಂದ ಗಣಿತ ಎಂದರೆ ಭಯಬೀತರಾಗದಿರಿ, ಒತ್ತಡ ಹಾಕಿಕೊಳ್ಳಬೇಡಿ, ಶಾಂತವಾಗಿದ್ದು ಏನನ್ನಾದರೂ ಗೆಲ್ಲಬಹುದು ಎಂಬುದರಲ್ಲಿ ನಂಬಿ, ಪರೀಕ್ಷೆ ಬರೆಯಿರಿ ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಧೈರ್ಯ ತುಂಬಿದರು.

ಗಣಿತ ಭಯವನ್ನು ಹೋಗಲಾಡಿಸಲು ನಿರಂತರ ಅಭ್ಯಾಸ, ಪ್ರಮೇಯಗಳು ಮತ್ತು ಸೂತ್ರಗಳನ್ನು ಪ್ರತಿದಿನ ಬರೆದು ಅಭ್ಯಾಸ ಮಾಡುವುದು ಮುಖ್ಯ. ದಿನಕ್ಕೆ 1-2 ಗಂಟೆಗಳ ಕಾಲ ಲೆಕ್ಕಗಳನ್ನು ಬಿಡಿಸುವುದರಿಂದ ಕಠಿಣ ಸಮಸ್ಯೆಗಳೂ ಸುಲಭವಾಗುತ್ತವೆ, ಈ ನಿಟ್ಟಿನಲ್ಲಿ ಪರೀಕ್ಷೆಯನ್ನು ಸಂಭ್ರಮದಿಂದ ಎದುರಿಸಿ ಎಂದರು.

ಔರಾದ್.ಬಿ ಕೆಪಿಎಸ್ ಶಾಲೆಯ ಸಹ ಶಿಕ್ಷಕ ರಾಜೇಶ್ ನಾಗೂರೆ ವಿಜ್ಞಾನ ವಿಷಯ ಕುರಿತು ಮಾತನಾಡಿ, ಭತಶಾಸ್ತ್ರ, ರಾಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ತಿಳಿಸಿದರು. ಈ ಮೂರು ವಿಷಯಗಳಲ್ಲಿ ಅತ್ಯಂತ ಪ್ರಮುಖವಾದ ತಲಾ ನಾಲ್ಕು ಅಧ್ಯಾಯಗಳ ಬಗ್ಗೆ ತಿಳಿಸಿದರು. ಪ್ರತಿಯೊಂದು ನಾಲ್ಕು ಅಧ್ಯಾಯಗಳನ್ನು ಸರಿಯಾಗಿ ಅಭ್ಯಾಸ ಮಾಡಿದರೆ ಅಂಕಗಳು ಹೆಚ್ಚು ತೆಗೆದುಕೊಳ್ಳಬಹುದು. ವಿಜ್ಞಾನದ ಚಿತ್ರ ಬಿಡಿಸುವಿಕೆ ಸೇರಿ ಹಲವು ವಿಷಯಗಳ ಕೌಶಲಯುಕ್ತ ಪ್ರಶ್ನೆಗಳು ಹೇಗೆ ಕೇಳಬಹುದು ಎಂಬುದರ ಬಗ್ಗೆಯೂ ತಿಳಿಸಿದರು. ಯಾವುದೇ ಗೊಂದಲ ಅಥವಾ ಆತಂಕ ಇಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆಗ ಉತ್ತಮ ಅಂಕಗಳನ್ನು ಗಳಿಸುತ್ತೀರಿ ಎಂದು ಕಿವಿಮಾತು ಹೇಳಿದರು.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಕಾಶಿನಾಥ ಗುತ್ತೆದಾರ ಪ್ರಾಸ್ತವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಭಯ ಹೋಗಲಾಡಿಸಲು ಕಾರ್ಯಗಾರಗಳನ್ನು ನಡೆಸಿ ಅವರಲ್ಲಿ ಆತ್ಮ ಬಲ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದೇವೆ. ತಾಲೂಕಿನ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಚಿತ್ತಾಪುರ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ್, ಸರಕಾರಿ ಕನ್ಯಾ ಪ್ರೌಢ ಶಾಲೆಯ ಮುಖ್ಯಗುರು ಮಲ್ಲಪ್ಪ ಚೆನ್ನಮಲ್ಲಪ್ಪ, ಎನ್ಇಎಸ್ ಪ್ರೌಢ ಶಾಲೆಯ ಮುಖ್ಯಗುರು ಪ್ರಕಾಶ ಪಾಟೀಲ, ಮಹಾತ್ಮ ಗಾಂಧಿ ಪ್ರೌಢ ಶಾಲೆಯ ಮುಖ್ಯಗುರು ರಮೇಶ ಬಟಗೇರಿ ವೇದಿಕೆಯಲ್ಲಿದ್ದರು. ಇಂಗಳಗಿ ಪ್ರೌಢ ಶಾಲೆಯ ಮುಖ್ಯಗುರು ಛತ್ರು ರಾಠೋಡ, ಪದಾಧಿಕಾರಿಗಳಾದ ಶಾಂತಕುಮಾರ್ ಮಳಖೇಡ, ರವಿಶಂಕರ್ ಬುರ್ಲಿ, ದೇವಪ್ಪ ನಂದೂರಕರ್, ಮಹ್ಮದ್ ಮಶಾಕ್, ವಿಜಯಕುಮಾರ್ ಭಂಕಲಗಿ, ಸುಭಾಷ್ ಬೆನಕನಳ್ಳಿ, ವಿಜಯಕುಮಾರ್ ಹರವಾಳ, ಸಂಜು ಚೌದರಿ ಸೇರಿದಂತೆ ಇತರರು ಇದ್ದರು.

ಹಾಸ್ಯ ಕಲಾವಿದ ರಾಚಯ್ಯಸ್ವಾಮಿ ಖಾನಾಪೂರ ಅವರ ಹಾಸ್ಯ ಎಲ್ಲರಲ್ಲೂ ರೋಮಾಂಚನ ಮತ್ತು ಉತ್ಸಾಹ ಜೊತೆಗೆ ವಿದ್ಯಾರ್ಥಿಗಳಲ್ಲಿನ ಬೇಸರವನ್ನು ದೂರ ಮಾಡಿತು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ಕಾಶಿರಾಯ ಕಲಾಲ್ ವಂದಿಸಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು, ಅಲ್ಲದೇ ಕಾರ್ಯಾಗಾರದ ಕುರಿತು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ವಿಷಯ ತಜ್ಞರು ಅತ್ಯಂತ ಸಮಾಧಾನದಿಂದ ಉತ್ತರಿಸಿ ಗೊಂದಲ-ಅನುಮಾನಗಳನ್ನು ಪರಿಹರಿಸಿದರು.

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಆತಂಕ, ಕೊನೆ ಹಂತದ ಗೊಂದಲ, ವಿದ್ಯಾರ್ಥಿಗಳ ಜ್ಞಾನದ ದಾಹ ತಣಿಸುವಲ್ಲಿ ಯಶಸ್ವಿಯಾಯಿತು. ಪರೀಕ್ಷಾ ಪರಿಸರ, ಪ್ರಶ್ನೆ ಪತ್ರಿಕೆ ಓದುವುದರಿಂದ ಕೊನೆಯ ಉತ್ತರದವರೆಗೂ ವಹಿಸಬೇಕಾದ ಜಾಗರೂಕತೆ, ಯಾವ ಪ್ರಶ್ನೆಗಳು, ನಕ್ಷೆಗಳು, ಚಿತ್ರಗಳು ಪ್ರಮುಖವಾಗಿರುತ್ತವೆ, ಯಾವ ಪಾಠಕ್ಕೆ ಎಷ್ಟು ಅಂಕಗಳು ಎನ್ನುವುದನ್ನು ಎಳೆಎಳೆಯಾಗಿ ಹೇಳುವ ಮೂಲಕ ಮಕ್ಕಳ ಕುತೂಹಲ ತಣಿಸಿದರು. ಪರೀಕ್ಷೆಯನ್ನು ಯಾವುದೇ ಭಯ, ಆತಂಕ ಇಲ್ಲದೆ ಧೈರ್ಯದಿಂದ ಎದುರಿಸಿ ಜಯಶಾಲಿಯಾಗುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸುವಲ್ಲಿ ಕಾರ್ಯಾಗಾರ ಯಶಸ್ವಿಯಾಯಿತು.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕಾರ್ಯಕ್ಕೆ ಶ್ಲಾಘನೆ :

ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಪರೀಕ್ಷಾ ಮಾರ್ಗದರ್ಶನ, ಪರೀಕ್ಷಾ ಟಿಫ್ಸ್‌ಗಳನ್ನು ಮಕ್ಕಳಿಗೆ ತಿಳಿಸಿಕೊಡಲು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯಾಗಾರಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ಲಾಘಿಸಿದರು.

ಶಿಕ್ಷಣ ಇಲಾಖೆ ಮಾಡುವ ಕೆಲಸಕ್ಕೆ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕೈ ಜೋಡಿಸುವ ಮೂಲಕ ಮಾದರಿಯ ಕೆಲಸ ಮಾಡಿದೆ. ಈ ಕಾರ್ಯಾಗಾರ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ. ಹೆಚ್ಚಿನ ಅಂಕ ಗಳಿಸಲು ಈ ಕಾರ್ಯಾಗಾರ ತುಂಬಾ ನೆರವಾಗಿದೆ ಎಂದು ಮುಖ್ಯಗುರುಗಳಾದ ಕಾಶಿರಾಯ ಕಲಾಲ್, ಮಲ್ಲಪ್ಪ ಚೆನ್ನಮಲ್ಲಪ್ಪ, ಪ್ರಕಾಶ್ ಪಾಟೀಲ ಮತ್ತು ರಮೇಶ್ ಬೆಟಗೇರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!