Oplus_0

ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ 16 ನೇ ವಾರ್ಷಿಕೋತ್ಸವ | ಜಗತ್ತು ಒಂದು ಡೊನೇಷನ್ ಇಲ್ಲದ ಪಾಠಶಾಲೆ ಇದ್ದಂತೆ: ಗವಿಮಠದ ಶ್ರೀ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜಗತ್ತಿಗೆ ಎಲ್ಲರೂ ಅತಿಥಿಗಳಾಗಿ ಬಂದಿದ್ದಾರೆ ಯಾರೂ ಖಾಯಂ ಆಗಿ ಇರಲು ಬಂದಿಲ್ಲ, ಜಗತ್ತು ಒಂದು ಡೊನೇಷನ್ ಇಲ್ಲದ ಪಾಠಶಾಲೆ ಇದ್ದಂತೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಕ್ರೀಡಾಂಗಣ ಎದುರುಗಡೆಯ ಎಂ.ಬಿ.ಪಾಟೀಲ ಪಬ್ಲಿಕ್ ಶಾಲಾ ಆವರಣದಲ್ಲಿ ಸೋಮವಾರ ನಡೆದ ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಸಂಚಾಲಿತ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಸ್ಮಾರಕ ಸಿ.ಬಿ.ಎಸ್.ಇ. ಶಾಲೆ, ಪಿಯು ಮತ್ತು ಪದವಿ (ವಿಜ್ಞಾನ ಮತ್ತು ವಾಣಿಜ್ಯ) ಕಾಲೇಜು, ಹಾಗೂ ಎಂ.ಬಿ. ಪಾಟೀಲ ಪಬ್ಲಿಕ್ ಶಾಲೆ ಮತ್ತು ಪಿಯು (ಕಲಾ) ಕಾಲೇಜುಗಳ 16 ನೇ ವಾರ್ಷಿಕೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನ ದೇವರು ಕೊಟ್ಟ ಒಂದು ಆಮಂತ್ರಣ, ಜಗತ್ತಿಗೆ ಅತಿಥಿಗಳಾಗಿ ಬಂದಿದ್ದೇವೆ ಖಾಯಂ ಆಗಿ ಇರಲು ಬಂದಿಲ್ಲ ನಾಲ್ಕು ದಿನದ ಜಾತ್ರೆಗೆ ಒಂದೊಂದು ಪಾತ್ರದಲ್ಲಿ ಬಂದಿದ್ದೇವೆ ಜಾತ್ರೆ ಮುಗಿದ ನಂತರ ಹೋಗಲೇಬೇಕು ಎಂದು ಹೇಳಿದರು.

ಬದುಕಿನುದ್ದಕ್ಕೂ ಕಲಿಯುವುದು ಸಾಕಷ್ಟಿದೆ. ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥ ಆಗುವುದಿಲ್ಲ ಇದನ್ನರಿತ ನಾಗರೆಡ್ಡಿ ಪಾಟೀಲ ಅವರು ವಿಶ್ವಗುರು ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಇಲ್ಲಿ ಕಲಿತವರನ್ನು ವಿಶ್ವಗುರುವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ ಎಂದು ಹೇಳಿದರು.

ಮನಸ್ಸಿನಲ್ಲಿಯ ಬ್ಯಾಡವಾದ ವಿಷಯಗಳನ್ನು ತೆಗೆದು ಹಾಕಿದಾಗ ತಾನೇ ದೇವರಾಗುತ್ತಾನೆ, ಮನುಷ್ಯನನ್ನು ದೆವರನ್ನಾಗಿ, ವಿಶ್ವಗುರುವನ್ನಾಗಿ ಮಾಡುವುದೇ ಶಿಕ್ಷಣ. ಕಾಡಿನಲ್ಲಿ ಕಾಡುಪ್ರಾಣಿಗಳು ಇರುತ್ತವೆ ಆದರೆ ನಾಡಿನಲ್ಲಿ ಕಾಡುವ ಪ್ರಾಣಿಗಳು ಇರುತ್ತವೆ ಇದರ ಮಧ್ಯೆ ಬದುಕು ಮಾಡಬೇಕಿದೆ ಎಂದರು.

ಮನುಷ್ಯನು ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ, ಸತ್ಯವನ್ನು ತಿಳಿಯುವ ಪ್ರಯತ್ನ ಮಾಡುತ್ತಿಲ್ಲ ಹೀಗಾಗಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಗದ್ದಲ, ಜಗಳ ಹಾಗೂ ಸಂಘರ್ಷಗಳು ನಡೆಯುತ್ತಿವೆ. ಸತ್ಯವನ್ನು ಅವರವರ ದೃಷ್ಟಿಕೋನದಲ್ಲಿ ನೋಡುತ್ತಾರೆ ಈ ನಿಟ್ಟಿನಲ್ಲಿ ಸತ್ಯವನ್ನು ಪ್ರೀತಿಸುತ್ತಿಲ್ಲ ದೃಷ್ಟಿಕೋನವನ್ನು ಪ್ರೀತಿಸುತ್ತಾರೆ. ಯಾವುದು ಇದೆಯೋ ಅದು ಸತ್ಯ ಎಂದರು.

ಮನುಷ್ಯ ಸತ್ಯದ ಬೆನ್ನು ಹತ್ತಿಲ್ಲ ಹವಾ ದ ಬೆನ್ನು ಹತ್ತಿದ್ದಾನೆ, ಸತ್ಯವನ್ನು ತಿಳಿದುಕೊಳ್ಳಲಾರದಕ್ಕೆ ಸಂಘರ್ಷಗಳು ನಡೆಯುತ್ತಿವೆ. ಪ್ರಕೃತಿಯಲ್ಲಿ ಯಾವುದು ಕೆಟ್ಟಿಲ್ಲ ಆದರೆ ಮನುಷ್ಯನ ಮನಸ್ಸು ಕೆಟ್ಟಿದೆ. ಇದನ್ನು ಸರಿಪಡಿಸಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಬರೀ ಸಂಪತ್ತು ಮಾಡಿದರೆ ಸಾಲದು ಅದನ್ನು ಯಾವ ರೀತಿ ಉಳಿಸಿಕೊಂಡು ಹೋಗುವ ಸಂಸ್ಕಾರ ನೀಡುವುದು ಮುಖ್ಯ ಎಂದು ತಿಳಿಸಿದರು.

ಸಂಪತ್ತು ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರ ಕೂಡ ಮುಖ್ಯ. ಏನೇ ಮಾಡಿದರೂ ಅದು ಚೆಂದವಾಗಿ ಹಾಗೂ ಕಲಾತ್ಮಕವಾಗಿ ಮಾಡಬೇಕು. ಒಳ್ಳೆಯದು ಕೇಳು, ಒಳ್ಳೆಯದು ಹೇಳು ಮತ್ತು ಒಳ್ಳೆಯದು ಮಾಡು ಇದು ಜೀವನಕ್ಕೆ ಮುಖ್ಯ, ಇದನ್ನು ಸತ್ಸಂಗ ಎನ್ನುವರು. ಬದುಕಿನ ಬಂಡಿಗೆ ಶರಣರ ವಾಣಿ ಚಕ್ರದ ಕೀಲು ಇದ್ದಂತೆ ಈ ನಿಟ್ಟಿನಲ್ಲಿ ಗುರುಹಿರಿಯರಿಗೆ ಗೌರವಿಸಬೇಕು ಎಂದು ಆಶೀರ್ವಚನ ನೀಡಿದರು.

ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆ ವಹಿಸಿದ್ದರು. ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ ಶಿವಾಚಾರ್ಯರು, ಕುಕನೂರ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಉದನೂರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಬುರಗಿ ಡಿಡಿಪಿಐ ಶಂಕ್ರಮ್ಮ ಡವಳಗಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ವೇದಿಕೆಯಲ್ಲಿದ್ದರು. ಅಣ್ಣಾರಾವ ಪಾಟೀಲ ಮುಡಬೂಳ, ಪ್ರಕಾಶ್ ಜೈನ್, ವಿಶ್ವಾರಾಧ್ಯ ಪಾಟೀಲ, ಬಸವರಾಜ ಪೂಜಾರಿ, ಖಾಜಾ ಹುಸೇನ್, ಶರಣಗೌಡ ಪೊಲೀಸ್ ಪಾಟೀಲ್, ವಿಶ್ವ ಮಲಕೂಡ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

ತ್ರಿವೇಣಿ ಪಾಟೀಲ ಸ್ವಾಗತಿಸಿದರು, ಸೋಮಶೇಖರ ಕಲ್ಲಶೆಟ್ಟಿ ನಿರೂಪಿಸಿದರು, ಶ್ರೀದೇವಿ ಗಂಜಿ ವಂದಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪಡೆದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಎಸ್ಸೆಸ್ಸೆಲ್ಸಿ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Spread the love

Leave a Reply

Your email address will not be published. Required fields are marked *

error: Content is protected !!