ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ | ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾದ ಸುಳ್ಳು ಪೋಕ್ಸೋ ಪ್ರಕರಣ ರದ್ದುಗೊಳಿಸಿ, ದೂರು ದಾಖಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಮಾದಾರ ಆಗ್ರಹ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜ್ ಶ್ರೀ ಮಲ್ಲಿಕಾರ್ಜುನ ಮುತ್ಯಾ ರವರ ವಿರುದ್ಧ ದಾಖಲಾದ ಸುಳ್ಳು ಪೋಕ್ಸೋ ಪ್ರಕರಣ ರದ್ದುಗೊಳಿಸಬೇಕು ಹಾಗೂ ದುರುದ್ದೇಶದಿಂದ ದೂರು ದಾಖಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ಮುಖಂಡರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಈ ವೇಳೆ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಮಾತನಾಡಿ, ಮಹಲ್ ರೋಜ್ ಮಠದಲ್ಲಿ ಪ್ರತಿ ವರ್ಷ ಮೊಹರಂ ಆಚರಣೆ ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ತೆಲಂಗಾಣ ಆಂಧ್ರ ದಿಂದಲೂ ಬರುತ್ತಾರೆ. ಅದೆ ರೀತಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಾತ್ರಾ ಮಹೋತ್ಸವ ಕೂಡ ನಡೆಯುತ್ತದೆ. ಈ ಸಂಧರ್ಭದಲ್ಲಿ ಆ ಭಾಗದ ರೈತರಿಗೆ ಅನುಕೂಲವಾಗಲೆಂದು ದೊಡ್ಡ ಪ್ರಮಾಣದಲ್ಲಿ ಎತ್ತುಗಳ ಜಾತ್ರೆ ನಡೆಯುತ್ತದೆ. ಅದೇ ರೀತಿ ಬಡವರಿಗೆ ಅನುಕೂಲವಾಗಲೆಂದು ಪ್ರತಿ ವರ್ಷ ಸಾಮೂಹಿಕ ವಿವಾಹವನ್ನು ಸಹ ಉಚಿತವಾಗಿ ಮಠದ ವತಿಯಿಂದ ನಡೆಸಿಕೊಂಡು ಬರುತ್ತಿದ್ದು, ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಸಹ ಮಠದ ವತಿಯಿಂದ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಸಿದ್ದ ಮಠವಾಗಿರುತ್ತದೆ. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡಿ ಶ್ರೀ ಮಲ್ಲಿಕಾರ್ಜುನ್ ಮುತ್ಯಾ ರವರ ಏಳಿಗೆಯನ್ನು ಸಹಿಸದೆ ಅವರ ಹೆಸರನ್ನು ಕೆಡಿಸಿ ತೇಜೋವಧೆ ಮಾಡಿ ಅವರ ಗೌರವಕ್ಕೆ ಧಕ್ಕೆ ತರುವ ಷಡ್ಯಂತ್ರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿ ಕಾರಿದರು.

ಮಹಾರಾಷ್ಟ್ರ ಸೊಲ್ಲಾಪೂರ ಮೂಲದ ಮಠದ ಸದ್ಭಕ್ತರಾದ ಅಮರ ಕಾಂಬಳೆ ಹಾಗೂ ಅವರ ಪತ್ನಿ ರಾಜಶ್ರೀ ಕಾಂಬಳೆ ರವರು ಅವರ ಮಗಳೊಂದಿಗೆ ಸುಮಾರು ವರ್ಷದಿಂದ ಆಗಾಗ ಸದರಿ ಮಠಕ್ಕೆ ಬಂದು ಹೋಗುತ್ತಿರುತ್ತಾರೆ. ಈ ಕುಟುಂಬ ಮಠದ ಭಕ್ತರಾಗಿರುವುದರಿಂದ ಶ್ರೀ ಮಲ್ಲಿಕಾರ್ಜುನ್ ಮುತ್ಯಾ ರವರಿಗೆ ಅತ್ಯಂತ ಆಪ್ತರಾಗಿದ್ದು, ಶ್ರೀ ಮಲ್ಲಿಕಾರ್ಜುನ್ ಮುತ್ಯಾರವರು ಸಹ ಅವರ ಮಗಳನ್ನು ತನ್ನ ಮಗಳೆಂದು ಭಾವಿಸಿದ್ದು, ತಂದೆ ತಾಯಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರ ಸಮಕ್ಷಮದಲ್ಲಿಯೇ ಪ್ರೀತಿ, ಮಮತೆಯಿಂದ ಇರುವ ದೃಶ್ಯವನ್ನು ಆ ಪುಟ್ಟ ಮಗಳ ತಂದೆ ಸದರಿ ಮುತ್ಯಾರವರ ಅಭಿಮಾನದಿಂದ ಖುಷಿಯಿಂದ ತಮ್ಮ ಸ್ವಂತ ಮೊಬೈಲದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದನ್ನು ಸದರಿ ಮುತ್ಯಾರವರ ವಿರೋಧಿಗಳು ಅವರ ಏಳಿಗೆಯನ್ನು ಸಹಿಸದೆ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿಯ ವಿಡೀಯೊವನ್ನು ತಿರುಚಿ ಮಗುವಿನ ಮುಖವನ್ನು ಬ್ಲರ್ ಮಾಡದೇ ಸದರಿ ಮುತ್ಯಾರವರು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದ್ದು, ಇದರ ಬಗ್ಗೆ ಸೂಕ್ತ ತನಿಖೆ ಮಾಡದೇ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡೀಯೊವನ್ನು ವೀಕ್ಷಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬಿ ರವರ ಹೇಳಿಕೆಯಂತೆ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದು ಕೋಲಿ ಸಮಾಜ ಉಗ್ರವಾಗಿ ಖಂಡಿಸುತ್ತದೆ ಎಂದರು.

ಕಲ್ಯಾಣ ಕರ್ನಾಟಕ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಮಠದ ಅಸಂಖ್ಯಾತ ಭಕ್ತರ ಮನಸ್ಸಿಗೆ ನೋವಾಗಿದ್ದು, ಇದರ ಬಗ್ಗೆ ನಿಷ್ಪಕ್ಷಪಾತವಾಗಿ ಸೂಕ್ತ ತನಿಖೆ ಕೈಗೊಂಡು ಆ ಮಗುವಿನ ಹೇಳಿಕೆ ಹಾಗೂ ಅವರ ತಂದೆ ತಾಯಿಗಳ ಹೇಳಿಕೆಗಳನ್ನು ಪರಿಗಣಿಸಿ, ಶ್ರೀ ಮಲ್ಲಿಕಾರ್ಜುನ್ ಮುತ್ಯಾರವರ ವಿರುದ್ಧ ದಾಖಲಿಸಿದ ದೂರಿಗೆ ಬಿ. ರಿಪೋರ್ಟ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸದರಿ ಮುತ್ಯಾರವರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಮಠದ ಅಸಂಖ್ಯಾತ ಭಕ್ತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಕೂಡಲೇ ವಿಶೇಷ ಸಂಪುಟ ಸಭೆ ಕರೆದು ಸಂಪುಟ ಸಭೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ದಾಖಲಾಗಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಬೇಕು. ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇವರುಗಳ ಆತುರದ ನಿರ್ಧಾರದಿಂದಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ಪ್ರಾಥಮಿಕ ತನಿಖೆ ಕೈಗೊಳ್ಳದೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಈ ತಪ್ಪು ಎಸಗಿದ ಈ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇವಲ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋವನ್ನು ಪರಿಗಣಿಸಿ, ಮಗುವಿನ ಹಾಗೂ ಮಗುವಿನ ಪೋಷಕರ ಹೇಳಿಕೆ ಪಡೆಯದೇ ಅವರನ್ನು ಸರಿಯಾಗಿ ವಿಚಾರಿಸದೇ ಸುಮೊಟೋ ಕೇಸ್ ದಾಖಲಿಸಿಕೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ್ ಕೋಸುಂಬೆ ರವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸುಳ್ಳು ಸುದ್ದಿಯನ್ನು ಹರಿಬಿಟ್ಟ ಕೆಲ ಯೂಟ್ಯೂಬ್ ಚಾನೆಲ್ ಗಳು ಹಾಗೂ ಫೇಸ್ಬುಕ್, ಇನಸ್ಟ್ರಾಗ್ರಾಂ ಅಕೌಂಟ್ ಗಳ ಮೇಲೆ ಪ್ರಕರಣ ದಾಖಲಿಸಬೇಕು. ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ಪ್ರಕರಣ ದಾಖಲಾಗಲು ಪ್ರಮುಖ ಕಾರಣಿಕರ್ತ, ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಬ್ಲಾಕ್ ಮೇಲ್ ದಂಧೆಗಿಳಿದಿರುವ ಸಿದ್ದು ಹಿರೇಮಠ ವಿಡಿಯೋ ತಿರುಚಿ ಹರಿಬಿಟ್ಟು ಅಲ್ಲದೇ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿ ಪ್ರಕರಣ ದಾಖಲಿಸುವಂತೆ ಪುಷ್ಟಿಕರಣ ನೀಡಿ ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರ ಹಾಗೂ ಬಾಲಕೀಯ ಮಾನ ಹಾನಿ ಮಾಡಿದ ಈ ಬ್ಯಾಕ್ ಮೇಲರ್ ವಿರುದ್ಧ ತನಿಖೆ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಈತನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪೋಕ್ಸೋ ಪ್ರಕರಣದಲ್ಲಿ ದಾಖಲಾದ ಸಂತ್ರಸ್ತೆ ಮಾಹಿತಿ ಬಹಿರಂಗ ಪಡಿಸಬಾರದೆಂಬ ನಿಯಮಾವಳಿ ಇದ್ದರೂ ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರ ಪೋಕ್ಸೋ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ವೇದವ್ಯಾಸ ಪೀಠದ ಬ್ರಹ್ಮಶ್ರೀ ರಾಜಗುರುಸ್ವಾಮಿ ಜಗದ್ಗುರುಗಳು, ಅಗಸ್ಥೆ ಮಹಾಪೀಠ ತೊನಸನಹಳ್ಳಿಯ ಕೋಟುರೇಶ್ವರ ಮಹಾಸ್ವಾಮಿಗಳು, ಡಾ.ವರಲಿಂಗೇಶ್ವರ ಸ್ವಾಮೀಜಿ, ರಾಚೋಟೇಶ್ವರ ಕೈಲಾಸ ಮಠ ಅವರಳ್ಳಿ ಶ್ರೀ ಚಿದಾನಂದ ಮಹಾರಾಜರು, ರಾಂಪೂರಹಳ್ಳಿ ಶ್ರೀ ಉಪ್ಪಾರ ಸಮಾಜ ಜಗದ್ಗುರು ಭಗೀರಥಾನಂದ ಸ್ವಾಮೀಜಿ, ನಿಜಶರಣರ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮ ಬಸವಕಲ್ಯಾಣದ ರತ್ನಾಕಾಂತ್, ಸಿದ್ಧಶಿವಯೋಗಿ ಗೌರಿಗುಡ್ಡ ರಟಕಲ್, ಜೈ ಕರುನಾಡು ಜನಪರ ಸಮಿತಿ ರಾಜ್ಯಾಧ್ಯಕ್ಷ ಸಿದ್ದು ಎಚ್. ಜಮಾದಾರ, ರವಿರಾಜ್ ಕೊರವಿ, ಜಯಪ್ರಕಾಶ್ ಕಮಕನೂರ, ರಮೇಶ್ ನಾಟೀಕಾರ, ಬಸವರಾಜ ಬೂದಿಹಾಳ, ಸಂದೇಶ ಕಮಕನೂರ, ಶಿವಾನಂದ ಹೊನಗುಂಟಿ, ಹಣಮಂತ ಸಂಕನೂರ, ಶಿವುಕುಮಾರ ಸುಣಗಾರ, ಸುರೇಶ್ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!