ಚಿತ್ತಾಪುರ ಲಾಡ್ಜಿಂಗ್ ಕ್ರಾಸ್‌ನಿಂದ ಬಸ್ ಡಿಪೋವರೆಗೆ ರಸ್ತೆ ಮಧ್ಯ ಡಿವೈಡರ್ ಹಾಗೂ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಮೂರು ತಿಂಗಳಲ್ಲಿ ಮುಕ್ತಾಯ: ಭಾರತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗೃಹ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಂತೆ ನಗರೋತ್ಥಾನ ಯೋಜನೆಯಡಿ ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ಬಸ್ ಡಿಪೋವರೆಗೆ ರಸ್ತೆ ಮಧ್ಯ ಡಿವೈಡರ್ ಹಾಗೂ ಅಲಂಕಾರಿಕ (ಡೆಕೊರೇಟಿವ್) ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರು ಹೇಳಿದರು.
ಗುರುವಾರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದರಿ ಕಾಮಗಾರಿಯ ಒಟ್ಟು ಅಂದಾಜು ಮೊತ್ತ ರೂ. 120.00 ಲಕ್ಷಗಳು (ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ಬಸ್ ಡಿಪೋವರೆಗೆ ರಸ್ತೆ ಮಧ್ಯ ಡಿವೈಡರ್ ಮತ್ತು 35 ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಕೈಗೊಂಡಿದ್ದು, ಡಿವೈಡರ್ ಮಧ್ಯೆ ವಿವಿಧ ಗಿಡಗಳನ್ನು ನೆಡಲಾಗುವುದು. ಇದು ಚಿತ್ತಾಪುರ ಕ್ಕೆ ಬರುವವರಿಗೆ ಬಹಳ ಆಕರ್ಷಕವಾಗಿ ಕಂಡು ಬರಲಿದೆ ಪಟ್ಟಣದ ಸೌಂದರ್ಯ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಶಹಾಬಾದ ರಸ್ತೆ ಹಾಗೂ ಬಸ್ ನಿಲ್ದಾಣ ರಸ್ತೆಯಲ್ಲಿಯೂ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಈಗಾಗಲೇ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಿರಿಯ ಅಭಿಯಂತರ ರಾಕೇಶ್ ರೆಡ್ಡಿ, ಗುತ್ತಿಗೆದಾರ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

