ಚಿತ್ತಾಪುರ ಪಟ್ಟಣದಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಆಹಾರ ನಿರೀಕ್ಷಕರ ದಾಳಿ, ಪ್ರಕರಣ ದಾಖಲು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಮಠದ ಹತ್ತಿರ ಒಂದು ಹಳೆ ಮನೆಯಲ್ಲಿ ಯಾರೋ ವ್ಯಕ್ತಿಗಳು ಪಡಿತರ ಚೀಟಿಗೆ ವಿತರಣೆ ಮಾಡುವ ಅಕ್ಕಿ ಚೀಲಗಳನ್ನು ಸಂಗ್ರಹಿಸಿಟ್ಟಿರುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಆಹಾರ ನಿರೀಕ್ಷಕ ಹೀರಾಸಿಂಗ್ ದಾಮುಲು ಚವ್ಹಾಣ ದಾಳಿ ಮಾಡಿ ನಂತರ ಪೊಲೀಸ್ ಇಲಾಖೆಗೆ ನೀಡಿದ ದೂರಿನಂತೆ, ಆನಂದ ಶರಣಪ್ಪ ಕರದಳ್ಳಿ, ತನ್ವೀರ್ ಗುಲಾಮ ರಸೂಲ್ ಆಡಕಿ, ಅಶ್ವಥ್ ತುಕಾರಾಮ ರಾಠೋಡ ಇವರುಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.
40 ಕೆಜಿಯ 40 ಅಕ್ಕಿಯ ಪಾಕೀಟುಗಳು (ಕಪ್ಪು ಬಣ್ಣದ ಚೀಲಗಳು) ಒಟ್ಟು 16 ಕ್ವಿಂಟಾಲ್ ಅಕ್ಕಿ ರೂ.56,000, 40 ಕೆಜಿಯ 32 ಅಕ್ಕಿಯ ಪಾಕೀಟುಗಳು (ಬಳಿ ಬಣ್ಣದ ಚೀಲಗಳು) ಒಟ್ಟು 12.80 ಕ್ವಿಂಟಾಲ್ ಅಕ್ಕಿ ರೂ.44.800, 40 ಕೆಜಿಯ 4 ಪಾಕೀಟುಗಳು (ನಾಶಿ ಬಣ್ಣದ ಚೀಲಗಳು) ಒಟ್ಟು 1.60 ಕ್ವಿಂಟಾಲ್ ಅಕ್ಕಿ ರೂ.5600, 40 ಕೆಜಿಯ 4 ಪಾಕೀಟುಗಳು (ಗೋಣಿ ಚೀಲಗಳು) ಒಟ್ಟು 1.60 ಕ್ವಿಂಟಾಲ್ ರೂ.5600 ಇದ್ದು, ಹೀಗೇ ಒಟ್ಟು 32 ಕ್ವಿಂಟಾಲ್ ಅಕ್ಕಿ ರೂ.1.12 ಲಕ್ಷ ಮೌಲ್ಯದ ಅಕ್ಕಿಯನ್ನು ಆಹಾರ ನಿರೀಕ್ಷಕರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಹಾರ ನಿರೀಕ್ಷಕ ಸದರಿ ಆನಂದ ಇತನಿಗೆ ಅಕ್ಕಿಯನ್ನು ಎಲ್ಲಿಂದ ತಂದು ಸಂಗ್ರಹಿಸಿದಿಯಾ ಅಂತ ಕೇಳಿದಾಗ ಸದರಿ ಅವನು ನಾನು ಚಿತ್ತಾಪುರ ಪಟ್ಟಣದಲ್ಲಿನ ಸಾರ್ವಜನಿಕರಿಂದ ಪಡೆದುಕೊಂಡು ಸಂಗ್ರಹಿಸುತ್ತೇನೆ. ನಾನು ಅಕ್ಕಿ ಖರೀದಿ ಮಾಡಿ ಸಂಗ್ರಹಿಸಲು ಹಣವನ್ನು ತನ್ವೀರ್ ಇವರು ಕೊಡುತ್ತಾರೆ ಅಂತಾ ಹೇಳಿದನು. ಆಗ ಅಲ್ಲೇ ಇದ್ದ ತನ್ವೀರ್ ಇವನಿಗೆ ನೀನು ಈ ಅಕ್ಕಿಯನ್ನು ಏನು ಮಾಡುತ್ತಿಯಾ, ಯಾರಿಗೆ ಮಾರಾಟ ಮಾಡುತ್ತಿರಿ ಅಂತಾ ಕೇಳಿದಾಗ ನಾನು ಈಗ ಸುಮಾರು ತಿಂಗಳುಗಳಿಂದ ಸದರಿ ಅಕ್ಕಿಯನ್ನು ಜಮಾಯಿಸಿ ಅಶ್ವಥ್ ತುಕಾರಾಮ ರಾಠೋಡ ಇವರಿಗೆ ಕೊಡುತ್ತೇನೆ ಅವರು ನನಗೆ ಹಣವನ್ನು ಕೊಡುತ್ತಾರೆ, ಅಶ್ವಥ ರಾಠೋಡ ಇವರು ಯಾರಿಗೆ ಕೊಡುತ್ತಾರೆ ನನಗೆ ಗೊತ್ತಿಲ್ಲ ಅಂತಾ ಹೇಳಿರುತ್ತಾನೆ. ನಂತರ ಸದರಿ ಅಕ್ಕಿ ಪಾಕೀಟುಗಳನ್ನು ಪಂಚರ ಸಮಕ್ಷಮದಲ್ಲಿ, ಜಪ್ತಿ ಮಾಡಿಕೊಂಡು ಆರೋಪಿತರಿಬ್ಬರಿಗೂ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕುರಿತು ಆಹಾರ ನಿರೀಕ್ಷಕರು ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಚಿತ್ತಾಪುರ ಪೊಲೀಸ್ ಠಾಣೆ ಗುನ್ನೆ ನಂಬರ 86/2026 ಕಲಂ: 3,7 ಇ.ಸಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

