ಲಾಡ್ಲಾಪೂರ ಗ್ರಾಮದಲ್ಲಿ ಶಾಂತಿ ಸಭೆ | ಭಾವೈಕ್ಯತೆಯ ಭಗವಂತ ಶ್ರೀ ಹಾಜೀ ಸರ್ವರ್ ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸಿ: ಡಿವೈಎಸ್ಪಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಲಾಡ್ಲಾಪೂರ ಗ್ರಾಮದ ಭಾವೈಕ್ಯತೆಯ ಭಗವಂತ ಶ್ರೀ ಹಾಜೀ ಸರ್ವರ್, ಆದಿ ಶರಣರ ಜಾತ್ರಾ ಮಹೋತ್ಸವ ಯಶಸ್ವಿಗೆ ಪೊಲೀಸ್ ಇಲಾಖೆ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ತಾಲೂಕಿನ ಲಾಡ್ಲಾಪೂರ ಗ್ರಾಮ ಪಂಚಾಯಿತಿ ಆವರಣದಲ್ಲಿ ವಾಡಿ ಪೊಲೀಸ್ ಠಾಣೆಯಿಂದ ಹಾಜೀ ಸರ್ವರ್ ಜಾತ್ರೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆ ಯಶಸ್ವಿಗೆ ಪೊಲೀಸ್ ಇಲಾಖೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆಯ ಹಿರಿಮೆ ಗರಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಪ್ರಮುಖವಾಗಿದೆ ಎಂದರು.
ಜಾತ್ರೆಯಲ್ಲಿ ಪ್ರಮುಖವಾಗಿ ಎಲ್ಲರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸ್ವಚ್ಛತೆ ಎನ್ನುವುದು ಶಿಸ್ತಿನ ಪ್ರತಿರೂಪ ಇದ್ದಂತೆ. ಹೀಗಾಗಿ ಎಲ್ಲೆಂದರಲ್ಲಿ ಕಸಕಡ್ಡಿ ಎಸೆಯದೇ ನಿಗದಿತ ಕಸದ ಬುಟ್ಟಿಯಲ್ಲಿ ಅಥವಾ ಸ್ಥಳದಲ್ಲಿ ಹಾಕುವಂತೆ ತಿಳಿಹೇಳುವ ಮೂಲಕ ಸ್ವಚ್ಛತೆ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ಜಾತ್ರೆಯಿಂದ ಏನಾದರೊಂದು ಹೊಸತು ಕಲಿಯಬೇಕು, ಜಾತ್ರೆಯ ಹೆಸರಲ್ಲಿ ಅನಗತ್ಯ ಖರ್ಚುಗಳು ಕಡಿಮೆ ಮಾಡಿ ಜನೋಪಯೋಗಿ ಅಗತ್ಯ ಕೆಲಸಗಳಿಗೆ ಉಪಯೋಗಿಸಿ ಈ ನಿಟ್ಟಿನಲ್ಲಿ ಸಿಸಿ ಟಿವಿ, ಬ್ಯಾರಿಕೇಡ್, ವಿದ್ಯುತ್ ದೀಪಗಳು ಸೇರಿದಂತೆ ನೆನಪು ಇಡುವಂತಹ ಸಮಾಜಮುಖಿ ಕೆಲಸಗಳಿಗೆ ವೆಚ್ಚ ಮಾಡಿ ಎಂದು ಸಲಹೆ ನೀಡಿದರು. ಜಾತ್ರೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಅವರು ತುರ್ತು ಸೇವೆಗಳು ಒದಗಿಸಲು ಹಾಗೂ ಭಕ್ತಾದಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಂಚಾರಿ ನಿಯಮಗಳನ್ನು ಪಾಲಿಸಿ:
ವಾಹನ ಸವಾರರೆಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳಿಂದ ಮುಕ್ತರಾಗಿ, ಎಲ್ಲರೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜಾಗೃತಿಗಾಗಿ ಕೆಲವರಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ:
ಜಾತ್ರೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕಡಿವಾಣ ಹಾಕಲಾಗುವುದು, ಜೂಜಾಟ ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಪಿಐ ಎಸ್.ಸಿ.ಪಾಟೀಲ ಮಾತನಾಡಿ, ಭಾವೈಕ್ಯತೆಯ ಲಾಡ್ಲಾಪೂರ ಜಾತ್ರೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದಂತೆ ನಿಯಂತ್ರಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಪಘಾತಗಳ ಮುಕ್ತ ಜಾತ್ರೆ ಮಾಡಲು ಉದ್ದೇಶಿಸಲಾಗಿದೆ ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಿಡಿಒ ಮಲ್ಲೇಶಪ್ಪಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಅಣೆಮಿ, ಮುಖಂಡ ಪೋಮು ರಾಠೋಡ ಮಾತನಾಡಿದರು. ಕ್ರೈಂ ಪಿಎಸ್ಐ ರೇಣುಕಾ, ಗ್ರಾಪಂ ಹಂಗಾಮಿ ಅಧ್ಯಕ್ಷೆ ಕಾಳಮ್ಮ ಚಂದಮ್ಮ ಲಕಬಾ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಅನೇಕರು ಅಭಿಪ್ರಾಯಗಳು ವ್ಯಕ್ತಪಡಿಸಿದರು. ವಿಶ್ವನಾಥ ಸಾಹು ಗಂಧಿ, ನಾಗೇಂದ್ರಪ್ಪ ಸಾಹು ಮುಕ್ತೇದಾರ, ರಂಗರಾವ್ ಕುಲಕರ್ಣಿ, ಈರಣ್ಣ ಮಲಕಂಡಿ, ಹಣಮಯ್ಯ ಗುತ್ತೇದಾರ, ಸಾಬಣ್ಣ ಮುಸಲಾ, ಹಣಮಂತ ಗಲಗಿನ್ ಸೇರಿದಂತೆ ಇತರರು ಇದ್ದರು.
ವಾಡಿ ಪಿಎಸ್ಐ ತಿರುಮಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಕುಮಾರ್ ಎಣ್ಣಿ ನಿರೂಪಿಸಿ ವಂದಿಸಿದರು.

