ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಮಾಡುವಂತೆ ಸಾಯಬಣ್ಣ ಕಾಶಿ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಶಾಸಕರು, ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯದ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಸಾಯಬಣ್ಣ ಕಾಶಿ ಅವರು ಕಾಂಗ್ರೆಸ್ ಹೈ ಕಮಾಂಡ್ ಗೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಹಲವು ಖಾತೆಗಳ ಸಚಿವರಾಗಿ ಚಿತ್ತಾಪುರ ಕ್ಷೇತ್ರದ ಹಾಗೂ ಕಲಬುರಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ವಿಶೇಷವಾಗಿ ಎಜುಕೇಷನ್ ಹಬ್ ಹಾಗೂ ಸ್ಪೋರ್ಟ್ಸ್ ಹಬ್ ನಿರ್ಮಾಣ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಬುದ್ಧ, ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಡಿ ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಂತೆ ಮುನ್ನೆಡೆಯುತ್ತಿರುವ ಧೀಮಂತ ನಾಯಕರು, ನೇರ ನಡೆನುಡಿಗೆ ಹೆಸರಾದ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಮತ್ತು ಯೋಗ್ಯತೆ ಇದೆ, ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಗಮನ ಹರಿಸಿ. ಶೀಘ್ರವಾಗಿ ಇವರ ಹೆಸರು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರಲ್ಲಿ ಅಭಿವೃದ್ಧಿ ಹಾಗೂ ಬದಲಾವಣೆ ತರುವ ಬಗ್ಗೆ ದೂರದೃಷ್ಟಿ ಮತ್ತು ಇಚ್ಛಾಶಕ್ತಿ ಇದೆ, ರಾಜ್ಯದ 224 ಶಾಸಕರಲ್ಲಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹೊಸತನದ ಅಭಿವೃದ್ಧಿ ವಿಚಾರಗಳ ಹಾಗೂ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಅಧಿವೇಶನದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರಿಗೆ ಸಮರ್ಥವಾಗಿ ಮತ್ತು ಖಡಕ್ ಆಗಿ ಉತ್ತರಿಸುವ ಮೂಲಕ ವಿಶೇಷವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಅಲ್ಲದೇ ಇಡೀ ಕರ್ನಾಟಕ ರಾಜ್ಯಕ್ಕೆ ಇವರ ಸೇವೆ ಅಗತ್ಯವಾಗಿದ್ದು, ಇಂತಹ ಪ್ರಬುದ್ಧ ಮತ್ತು ಸಮರ್ಥ ನಾಯಕರಿಗೆ, ರಾಜ್ಯದ ಡಿಸಿಎಂ ಮಾಡಿದರೆ ರಾಜ್ಯಕ್ಕೆ ಹೊಸ ಚೈತನ್ಯ ಮತ್ತು ಯುವಕರಿಗೆ ಸ್ಫೂರ್ತಿ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
