ಬಂದರು ಅಭಿವೃದ್ಧಿಗಾಗಿ ಜಾಗತಿಕ ಟೆಂಡರ್ ಆಹ್ವಾನ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 ಎಂಟಿಪಿಎ ಸಾಮರ್ಥ್ಯದ ಸರ್ವಋತು ಬಂದರಿನ ಅಭಿವೃದ್ಧಿಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ನಲ್ಲಿ ಜಾಗತಿಕ ಟೆಂಡರ್ ನ್ನು ಆಹ್ವಾನಿಸಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ ತಿಳಿಸಿದ್ದಾರೆ.
ಯೋಜನೆಯ ಟೆಂಡರ್ ದಾಖಲೆಗಳನ್ನು ಕೆಪಿಪಿ ಪೋರ್ಟಲ್‌ನಿಂದ ಪಡೆಯಬಹುದು. ಟೆಂಡರ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿ, ಕರ್ನಾಟಕ ಜಲಸಾರಿಗೆ ಮಂಡಳಿ, ಬೆಂಗಳೂರಿಗೆ (ceokmb2019@gmail.com) ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಈ ಟೆಂಡರ್‌ಗೆ ಸಂಬಂಧಿಸಿದಂತೆ ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ವಿಸಿ ಮೂಲಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಕೆಎಂಬಿ ಖನಿಜ ಭವನ, ಮೂರನೇ ಮಹಡಿ, ಪಶ್ಚಿಮ ಪ್ರವೇಶ, ರೇಸ್ ಕೋರ್ಸ್ ರಸ್ತೆ, ಬೆಂಗಳೂರಿನಲ್ಲಿ – 560001 ಪೂರ್ವ-ಬಿಡ್ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಡ್‌ಗಳನ್ನು ಸ್ವೀಕರಿಸುವ ಕೊನೆಯ ಜನವರಿ 9 ರಂದು ಸಂಜೆ 5.30 ಗಂಟೆಗೆ ನಿಗದಿಯಾಗಿರುತ್ತದೆ. ಪಾವಿನಕುರ್ವೆ ಬಂದರಿನ ಅಭಿವೃದ್ಧಿಗೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಾವಿನಕುರ್ವೆ ಗ್ರಾಮದ ಸಮೀಪದ ಶರಾವತಿ ಮತ್ತು ಬಡಗಣಿ ನದಿ ಮುಖಜ ಭಾಗದಲ್ಲಿದೆ ಎಂದು ತಿಳಿಸಿದ್ದಾರೆ.
ಬಂದರಿನ ಉದ್ದೇಶಗಳು:
ನಿರ್ವಹಿಸಬಹುದಾದ ಸರಕು: ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಕೋಕಿಂಗ್ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಡಾಲಮೈಟ್, ಹಸಿರು ಹೈಡ್ರೋಜನ್, ಹಸಿರು ಅಮೋನಿಯಾ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳು ಮುಂತಾದವುಗಳು.
ಸರಕು ನಿರ್ವಹಣೆ ಸಾಮರ್ಥ್ಯ: ಆರಂಭದಲ್ಲಿ 14 ಎಂಟಿಪಿಎ (ಮಿಲಿಯನ್ ಟನ್ ಪ್ರತಿ ವರ್ಷ) ಸಾಮರ್ಥ್ಯದ ಕಾರ್ಗೊ ನಿರ್ವಹಣೆಗೆ ಯೋಜಿಸಲಾಗಿದ್ದು, ಭವಿಷ್ಯದಲ್ಲಿ ಸುಮಾರು 40 ಎಂಟಿಪಿಎ ಗೆ ವಿಸ್ತರಿಸುವ ಸಾಧ್ಯತೆಯನ್ನು ಹೊಂದಿದೆ.
ಹಡಗು ನಿರ್ವಹಣೆ ಸಾಮರ್ಥ್ಯ: ಬಂದರವು 1,80,000 ಡಿಡಬ್ಲುಟಿ ಸಾಮರ್ಥ್ಯದ ಬೃಹತ್ ಗಾತ್ರದ ಹಡಗುಗಳನ್ನು ನಿರ್ವಹಿಸಲು ಆಧುನಿಕ, ಪರಿಸರ ಸ್ನೇಹಿ ಮತ್ತು ಹೆಚ್ಚಿನ ಸಾಮರ್ಥ್ಯದ ಉಪಕರಣಗಳೊಂದಿಗೆ ಆಳವಾದ ವಾಣಿಜ್ಯ ಹಡಗುಗಳು ತಂಗಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಅಳವಡಿಸಲು ಅವಕಾಶವಿರುತ್ತದೆ.
ಲಭ್ಯವಿರುವ ಜಾಗೆ: ಬಂದರಿನ ಸುಗಮ ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು 214 ಹೆಕ್ಟರ್ ಬಂದರು ಜಾಗೆ ಲಭ್ಯವಾಗುವ ಸಾಧ್ಯತೆಯಿದೆ. ಉದ್ದೇಶಿತ ಬಂದರು ಜಾಗೆಯನ್ನು ಹೂಳೆತ್ತುವಿಕೆಯ ಮಣ್ಣಿನಿಂದ ಭರಾವು ಮಾಡಿ ಸೃಜಿಸಲಾಗುತ್ತದೆ.
ಯೋಜನೆಯ ವೆಚ್ಚ: ಸದರಿ ಬಂದರಿನ ಅಭಿವೃದ್ಧಿಗೆ ಯೋಜನಾ ವೆಚ್ಚ 3,047.86 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಜಲಸಾರಿಗೆ ಮಂಡಳಿಯು ಉದ್ದೇಶಿತ ಪಾವಿನಕುರ್ವೆ ಬಂದರಿನ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅರ್ಹ ಉದ್ದಿಮೆದಾರರಿಂದ ಜಾಗತಿಕ ಬಿಡ್‌ನ್ನು ಆಹ್ವಾನಿಸುತ್ತದೆ ಹಾಗೂ ಆಸಕ್ತ ಬಿಡ್ಡುದಾರರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರವನ್ನು ನೀಡಲು ಕರ್ನಾಟಕ ಜಲಸಾರಿಗೆ ಮಂಡಳಿಯು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.