ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು| ಸಾಧನೆ ಮಾಡುವಂತಹ ಸಾಮರ್ಥ್ಯ ಹೆಣ್ಣುಮಕ್ಕಳಲ್ಲಿದೆ: ಹಿರೆಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮತ್ತು ತಾಳ್ಮೆ ಹಾಗೂ ಸಾಮರ್ಥ್ಯ ಕೇವಲ ಹಣ್ಣುಮಕ್ಕಳಲ್ಲಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನವನ್ನು ನೀಡಿದ್ದು ಅದನ್ನು ಪರಿಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಭೂಮಿಯ ಮೇಲೆ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಸಾಕಷ್ಟು ಉದಾಹರಣೆಗಳು ಇವೆ. ಅದರ ಜೊತೆಗೆ ಬಾಹ್ಯಾಕಾಶದಲ್ಲಿ ಸಹಿತ ಸಾಧನೆ ಮಾಡಿದ ಮಹಿಳೆಯರು ಇದ್ದಾರೆ, ಇಂಥ ಸಾಧನೆ ಮಾಡಲು ಛಲ ತಾಳ್ಮೆ ಮತ್ತು ಸಾಮರ್ಥ್ಯ ಅತ್ಯವಶ್ಯಕವಾಗಿದ್ದು ಅದು ಕೇವಲ ಹೆಣ್ಣು ಮಕ್ಕಳಲ್ಲಿ ಮಾತ್ರ ಇದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತಪ್ಪದ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ವರ್ಷಪೂರ್ತಿ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುತ್ತಿರುವ ಎಲ್ಲಾ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ, ಇಂತಹ ಉತ್ತಮ ಕಾರ್ಯವನ್ನು ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹದಾಯಕವಾಗಿ ಅವರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿಯೂ ಸಹಿತ ಇಂತಹ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಕಿವಿಮಾತು ಹೇಳಿದರು.
ನ್ಯಾಯವಾದಿ ಶರಣಮ್ಮ ಅವರು, ಕಾನೂನು ಅರಿವಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು, ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ್ ಕರದಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕರು ಅಂಜನಾದೇವಿ ಆರ್, ಆರೋಗ್ಯ ಇಲಾಖೆಯ ಶಾಂತಯ್ಯ ಸ್ವಾಮಿ, ತಾಲೂಕು ಪಂಚಾಯತ್ ಇಲಾಖೆಯ ನಾಗರಾಜ್ ಇದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ ಕಾರ್ಯಕರ್ತರಾದ ರೇಖಾ ಕುಲಕರ್ಣಿ, ಕರುಣಾ, ಕವಿತಾ, ಸಂಗೀತಾ, ಅನ್ನಪೂರ್ಣ, ನಿರ್ಮಲಾ, ಮೀರಾ, ಉಮಾದೇವಿ ದೇವಿಂದ್ರಮ್ಮ, ರುಬಿನಾ ಬೇಗಂ ಮತ್ತು ಸಹಾಯಕಿಯರಾದ ಈರಮ್ಮ, ಗಂಗಮ್ಮ, ಬಸ್ಸಮ್ಮ, ಸುಮಂಗಲಾ, ಮಲ್ಲಮ್ಮ, ರೇಷ್ಮಾ, ವಿಜಯಲಕ್ಷ್ಮಿ, ರಿಯಾನಾ ಬೇಗಂ, ಅನ್ನಪೂರ್ಣ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ವರ್ಷದ ಸಾಧಕಿ ಪ್ರಶಸ್ತಿ ಪುರಸ್ಕೃತೆ ಅಂಬೇಡ್ಕರ್ ನಗರ ಅಂಗನವಾಡಿ ಕೇಂದ್ರದ ಪ್ರೇಮಾ, ಪೋಷಣಾ ಯೋಜನೆ ಸಾಧಕಿ ಜಯಶ್ರೀ ಗುಂಡಗುರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿ ಕವಿತಾ ಪಾಟೀಲ್ ಅವರು ನಿರೂಪಿಸಿ ವಂದಿಸಿದರು.
