ಚಿತ್ತಾಪುರ ಗುರು ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರ ಆಕ್ರೋಶ, ಗೋಡೌನ್ ಮುಂದೆ ಜಮಾಯಿಸಿದ ಗ್ರಾಹಕರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಗುರು ಇಂಡೇನ್ ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರ ಆಕ್ರೋಶ ಮುಂದುವರೆದಿದೆ. ಗ್ಯಾಸ್ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಗ್ರಾಹಕರು ಗ್ಯಾಸ್ ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ಯಾಸ್ ಬುಕ್ಕಿಂಗ್ ಮಾಡಿದರೂ 10ರಿಂದ 15 ದಿನಗಳಾದರೂ ಸಿಲಿಂಡರ್ ಮನೆಗಳಿಗೆ ತಲುಪದ ಹಿನ್ನೆಲೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಗ್ರಾಹಕರು ಬೆಳಿಗ್ಗೆಯಿಂದಲೇ ಒಂಟಿ ಕಮಾನ್ ಹತ್ತಿರದ ಗ್ಯಾಸ್ ಗೋಡೌನ್ ಮುಂದೆ ಖಾಲಿ ಸಿಲಿಂಡರ್‌ಗಳೊಂದಿಗೆ ಸರದಿಯಲ್ಲಿ ಕುಳಿತಿದ್ದರು. ರಾತ್ರಿ 9 ಗಂಟೆಯಾದರೂ ಸಿಲಿಂಡರ್ ಸಿಗದೆ ಪರದಾಡುವ ಸ್ಥಿತಿ ಕಳೆದ ಬುಧವಾರ ನಿರ್ಮಾಣವಾಗಿತ್ತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭಂಕಲಗಿ ಗ್ರಾಮದ ನಿವಾಸಿ ಶಾಂತಕುಮಾರ್ ರೆಡ್ಡಿ ಅವರು, “ನಾನು ಬೆಳಿಗ್ಗೆ 10 ಗಂಟೆಗೆ ಬಂದಿದ್ದೇನೆ. ಕಚೇರಿಯಿಂದ ಗೋಡೌನ್‌ಗೆ ಕಳುಹಿಸಿದರು. ಇಲ್ಲಿ ಹಣ ಪಡೆದು ಟೋಕನ್ ಕೊಟ್ಟು ಸರದಿಯಲ್ಲಿ ನಿಲ್ಲಿಸಿದರು. ಮಧ್ಯಾಹ್ನ ಬರುತ್ತದೆ, ಎರಡು ಗಂಟೆಗೆ ಬರುತ್ತದೆ ಎಂದು ಹೇಳುತ್ತಾ ಇದೀಗ ರಾತ್ರಿ ಆದರೂ ವಾಹನ ಬಂದಿಲ್ಲ. ನಾನು ದೃಷ್ಟಿಹೀನನು ಈಗ ಖಾಲಿ ಸಿಲಿಂಡರ್ ಹಿಡಿದು ಮನೆಗೆ ಹೇಗೆ ಹೋಗಬೇಕು? ಯಾವುದೇ ವಾಹನ ಸಿಗುತ್ತಿಲ್ಲ. 70ಕ್ಕೂ ಹೆಚ್ಚು ಖಾಲಿ ಸಿಲಿಂಡರ್‌ಗಳು ಇಲ್ಲಿ ಸರದಿಯಲ್ಲಿ ಇವೆ. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲ. ನಾವು ಹೇಗೆ ಬದುಕುವುದು? ಎಂದು ತಮ್ಮ ನೋವನ್ನು ಹಂಚಿಕೊಂಡರು.
43 ಡಿಗ್ರಿ ಬಿಸಿಲಿನಲ್ಲಿ ನಾವು ಉಪವಾಸವಾಗಿ ಕುಳಿತಿದ್ದೇವೆ. ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತದೆ. ನಾವು ನಿಮ್ಮ ಮನೆಗೆ ತಂದು ಕೊಡಬೇಕೇ?’ ಎಂಬ ನಿರ್ಲಕ್ಷ್ಯ ಉತ್ತರ ಕೊಡುತ್ತಾರೆ. ಈ ಸ್ಥಿತಿ ಮುಂದುವರಿದರೆ ಗ್ಯಾಸ್ ಅಂಗಡಿಯ ಮುಂದೆ ಕಟ್ಟಿಗೆ ತಂದು ಅಡುಗೆ ಮಾಡುವ ಪರಿಸ್ಥಿತಿ ಬರುತ್ತದೆ. ಸಮಸ್ಯೆ ಪರಿಹಾರವಾಗದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹಣಿಕೇರಾ ತಾಂಡದ ನಿವಾಸಿ ಧಾರನಾಯಕ ಪಿ. ರಾಠೋಡ ಮಾತನಾಡಿ, ಬೆಳಿಗ್ಗೆ 8 ಗಂಟೆಗೆ ಕುಟುಂಬ ಸಮೇತ ಬಂದಿದ್ದೇನೆ. ಟೋಕನ್ ಕೊಟ್ಟಿದ್ದಾರೆ, ಆದರೆ ರಾತ್ರಿ 8.30 ಆದರೂ ಸಿಲಿಂಡರ್ ಇಲ್ಲ. 10 ದಿನಗಳ ಹಿಂದೆ ಬುಕ್ಕಿಂಗ್ ಮಾಡಿದ್ದೇವೆ. ಚಹಾ, ನೀರು, ಊಟವಿಲ್ಲದೆ ಇಲ್ಲಿ ಕುಳಿತಿದ್ದೇವೆ ಎಂದು ಹೇಳಿದರು.
ಈ ಕೂಡಲೇ ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ಕಡೆ ಗಮನಹರಿಸಿ ಗುರು ಇಂಡೇನ್ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಮ ಕೈಗೊಂಡು ಮನೆಮನೆಗೆ ಗ್ಯಾಸ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

