ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ | 2,00,192 ಮತದಾರರು ಅಂತಿಮ, 51 ಸಾವಿರ ಮತದಾರರ ಕಡಿತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸಲಾದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆ ಪೂರ್ಣಗೊಂಡಿದ್ದು, ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಪ್ರಕಟಿಸಿದ್ದಾರೆ.
ಪರಿಷ್ಕೃತ ಅಂತಿಮ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 2,00,192 ಮತದಾರರ ಹೆಸರುಗಳು ದಾಖಲಾಗಿವೆ. ಈ ಕುರಿತು ಮಾಹಿತಿ ನೀಡಿರುವ ತಹಶೀಲ್ದಾರ್, ಅಂತಿಮ ಪಟ್ಟಿಯಲ್ಲಿ 1,00,958 ಪುರುಷರು, 99,221 ಮಹಿಳೆಯರು ಹಾಗೂ 15 ಇತರೆ ಮತದಾರರ ಹೆಸರುಗಳು ಸೇರಿವೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಮಾಹಿತಿಗಾಗಿ ಈ ಪಟ್ಟಿಯನ್ನು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಕೇಂದ್ರಗಳು ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಪ್ರಸ್ತುತ ಪಡಿಸಲಾಗಿದೆ.. ಇದರೊಂದಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲೂ ಸಹ ವೀಕ್ಷಣೆಗೆ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮತದಾರರ ಸಂಖ್ಯೆಯಲ್ಲಿ ಭಾರೀ ಕಡಿತ:
ಚುನಾವಣಾ ಆಯೋಗ ನಡೆಸಿದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಕ್ಷೇತ್ರದಲ್ಲೂ ವ್ಯಾಪಕವಾಗಿ ನಡೆದಿದ್ದು, ಇದರ ಪರಿಣಾಮವಾಗಿ ಈ ಮೊದಲಿದ್ದ ಮತದಾರರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿಂದೆ ಕ್ಷೇತ್ರದಲ್ಲಿ ಒಟ್ಟು 2,51,226 ಮತದಾರರು ಇದ್ದರು. ಆದರೆ, ಪ್ರಸ್ತುತ ಅಂತಿಮ ಪಟ್ಟಿ ಪ್ರಕಟಗೊಂಡಾಗ ಪರಿಶೀಲಿಸಿದಾಗ ಬರೋಬ್ಬರಿ 51,034 ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ಮೃತರ ಹೆಸರುಗಳು, ಸ್ಥಳಾಂತರಗೊಂಡವರು ಮತ್ತು ನಕಲಿ ಮತದಾರರ ಪರಿಶೀಲನೆ ಹಾಗೂ ತೆಗೆದುಹಾಕುವ ಪ್ರಕ್ರಿಯೆಯಿಂದಾಗಿ ಈ ಬೃಹತ್ ಸಂಖ್ಯೆಯಲ್ಲಿ ಹೆಸರುಗಳು ಕಡಿತಗೊಂಡಿವೆ.
ಹೆಸರು ಸೇರ್ಪಡೆಗೆ ಅವಕಾಶ: ನಿಮ್ಮ ಹೆಸರು ಪಟ್ಟಿಯಿಂದ ಕೈಬಿಟ್ಟಿದ್ದಲ್ಲಿ, ಮರುನೋಂದಣಿಗಾಗಿ ನಮೂನೆ-6 (Form-6) ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

