Oplus_0

ಚಿತ್ತಾಪುರ ಕ್ಷೇತ್ರದಿಂದ ನಾನು ಬಿಜೆಪಿ ಆಕಾಂಕ್ಷಿ | ಕ್ಷೇತ್ರದಲ್ಲಿ ಕೆಲಸ ಮಾಡಲು ಹೈಕಮಾಂಡ್ ಸೂಚನೆ: ಬಾಬುರಾವ್ ಚವ್ಹಾಣ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಬಿಜೆಪಿ ರಾಜ್ಯ ಮಾಜಿ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಆದ ನಂತರ ಇಲ್ಲಿವರೆಗೆ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕ್ಷೇತ್ರಕ್ಕೆ ಬಂದಿಲ್ಲ, ಎಲ್ಲಿದ್ದಾರೋ ಗೊತ್ತಿಲ್ಲ ಇದರಿಂದ ಇಲ್ಲಿನ ಕಾರ್ಯಕರ್ತರು ಅನಾಥರಾಗಿದ್ದಾರೆ. ಆದ್ದರಿಂದ ನಾನು ಈ ಕ್ಷೇತ್ರದ ಅಭ್ಯರ್ಥಿಯಾಗುವ ಇಚ್ಛೆಯನ್ನು ಪಕ್ಷದ ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದೇನೆ ಹೀಗಾಗಿ ನನ್ನನ್ನು ಕ್ಷೇತ್ರದಲ್ಲಿ ಕೆಲಸ ಮಾಡಲು ಹೈಕಮಾಂಡ್ ಸೂಚಿಸಿದೆ ಎಂದು ಹೇಳಿದರು.

ಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಬದಲಾವಣೆ ಆಗದೆ ಹೋದರೆ ನಾನು ಅಭ್ಯರ್ಥಿಯಾಗುತ್ತೇನೆ ಒಂದು ವೇಳೆ ಮೀಸಲು ಬದಲಾವಣೆ ಆದರೆ ಬಿ.ಜಿ.ಪಾಟೀಲ ಅಭ್ಯರ್ಥಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ಹಾಗೂ ಅನ್ಯಾಯ ಮಾಡುತ್ತಿದೆ ಹೀಗಾಗಿ ಕಾರ್ಯಕರ್ತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನುವ ಚರ್ಚೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಹಾಗೂ ಕೋರ್ ಕಮಿಟಿಯಲ್ಲಿ ನಡೆದಿದೆ. ಇದನ್ನು ಸರಿಪಡಿಸಲು ನಾನು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು.

ಚುನಾವಣೆ ನಂತರ ಇಲ್ಲಿನ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಕ್ಷೇತ್ರಕ್ಕೆ ಬರುತ್ತಿಲ್ಲ ಅವರು ಎಲ್ಲಿ ಇದ್ದಾರೋ ಗೊತ್ತಿಲ್ಲ ಅವರನ್ನು ಇಲ್ಲಿಗೆ ಬರದಂತೆ ಸಚಿವ ಪ್ರಿಯಾಂಕ್ ಖರ್ಗೆ ಏನೋ ಮಾಡಿದ್ದಾರೆ ಎನ್ನುವ ಅನುಮಾನ ಇದೆ ಎಂದು ಹೇಳಿದರು. ಮಣಿಕಂಠ ರಾಠೋಡ ಜಾತಿ ಲೇಪನ ಮಾಡಿ ಮಾತನಾಡಬಾರದು, ಯಾರೋ ಒಬ್ಬರು ತಪ್ಪು ಮಾಡಿದರೆ ಇಡೀ ಸಮಾಜವನ್ನು ಗುರಿಪಡಿಸಿ ಮಾತನಾಡುವುದು ತಪ್ಪು ಎಂದು ಹೇಳಿದರು.

ಚಿತ್ತಾಪುರ ಸೇರಿದಂತೆ ಕಲಬುರಗಿಯಲ್ಲಿ ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ, ಜೂಜಾಟ ಹಾಗೂ ಕೊಲೆಗಳು ಅವ್ಯಾಹತವಾಗಿ ನಡೆದಿವೆ. ಇದನ್ನು ನಿಯಂತ್ರಿಸುವ ಕೆಲಸ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿಲ್ಲ. ಮರಳು ಮಾಫಿಯಾದಲ್ಲಿ ಪೊಲೀಸ್ ಅಧಿಕಾರಿಗಳ ಹಾಗೂ ಸಚಿವರ ಹಿಂಬಾಲಕರ ಕೈವಾಡ ಇದೆ ಎಂದು ಆರೋಪಿಸಿದರು.

ವಾಡಿ ಗ್ರಾಮ ಪಂಚಾಯಿತಿ ಇರುವುದನ್ನು ನಾನು ಪುರಸಭೆಯನ್ನಾಗಿ ಮಾಡಿದ್ದೇನೆ. ವಾಡಿಯಲ್ಲಿ ಸ್ಲಂ ಜನರು, ದಿನ ದಲಿತರು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಹೀಗಾಗಿ 500 ಮನೆಗಳು ಒದಗಿಸಿಕೊಡಬೇಕು ಹಾಗೂ ಇಲ್ಲಿ ವಲಸೆ ಹೋಗುವುದನ್ನು ತಡೆಯಬೇಕು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಷಯಗಳ ಮಾತನಾಡುವುದನ್ನು ಬಿಟ್ಟು ಸ್ಥಳೀಯ ವಿಷಯ ಹಾಗೂ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಕಲಿಯಿರಿ ಎಂದು ನೇರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ:

ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 22 ಗ್ರಾಮ ಪಂಚಾಯಿತಿಗಳು ಇವೆ. ಬಹುತೇಕ ಪಂಚಾಯತಿಗಳಲ್ಲಿ ಅವ್ಯವಹಾರ ನಡೆದಿದೆ ಸರ್ಕಾರದ ಹಣ ಲೂಟಿಯಾಗಿದೆ ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಗಾಗ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ಸಭೆ ನಡೆಸಿ ಅವ್ಯವಹಾರಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.

ನ್ಯಾ.ನಾಗಮೋಹನದಾಸ್ ವರದಿಯಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯ:

ನ್ಯಾ.ನಾಗಮೋಹನದಾಸ್ ಒಳಮೀಸಲಾತಿ ವರದಿಯಲ್ಲಿ ಬಂಜಾರ ಜನಸಂಖ್ಯೆ 16,5,272 ಇದೆ ಎಂದು ತಿಳಿಸಲಾಗಿದೆ ಆದರೆ ವಾಸ್ತವದಲ್ಲಿ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿ ಸಮೀಕ್ಷೆ ಕಾರ್ಯ ಸರಿಯಾಗಿ ಮಾಡಿಲ್ಲ ಹೀಗಾಗಿ ಆಯೋಗದ ಮೇಲೆ ಅನುಮಾನ ಇದೆ ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಂಜಾರ ಸಮಾಜಕ್ಕೆ ಶೇ.4.5 ಮೀಸಲಾತಿ ನೀಡಲಾಗಿತ್ತು ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಶೇ.4 ಮೀಸಲಾತಿ ನೀಡುವ ಮೂಲಕ ಶೇ.0.5 ಕುಸಿದುಕೊಂಡು ಅನ್ಯಾಯ ಮಾಡಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಾಬು ಪವಾರ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!