ಚಿತ್ತಾಪುರ ಪುರಸಭೆ ಸಾಮಾನ್ಯ ಸಭೆ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಪುರಸಭೆ ಸದಸ್ಯರ ತೀವ್ರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪುರಸಭೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ, ಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ, ಇದರಿಂದ ನಾವು ಜನರಿಂದ ಬೈಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ, ಪೋನ್ ಮಾಡಿದರೆ ಕರೆ ಸ್ವೀಕರಿಸಲ್ಲ, ಪುನಃ ಪೋನ್ ಕೂಡ ಮಾಡುವುದಿಲ್ಲ, ಕನಿಷ್ಠ ಪಕ್ಷ ಸ್ಪಂದನೆ ಇಲ್ಲ ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸದಸ್ಯರಾದ ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ಶೀಲಾ ಕಾಶಿ, ಪಾಶಾಮಿಯ್ಯಾ ಖುರೇಷಿ, ರಸೂಲ್ ಮುಸ್ತಫಾ, ಶ್ರೀನಿವಾಸರೆಡ್ಡಿ ಪಾಲಪ್, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಿವರಾಜ್ ಪಾಳೇದ್ ಸೇರಿದಂತೆ ಸರ್ವ ಸದಸ್ಯರು ಜೆಸ್ಕಾಂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಪಟ್ಟಣದಲ್ಲಿ ಜಿತುರೆ ಈಜು ಕೊಳಕ್ಕೆ ಸೇರಿದಂತೆ ನಾನಾ ಕಡೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ್ದರಿಂದ ವಿದ್ಯುತ್ ಸಮಸ್ಯೆ ಆಗುತ್ತಿದೆ ಮೊದಲು ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ ಅವರು ಆಗ್ರಹಿಸಿದರು. ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ಪುರಸಭೆ ಸದಸ್ಯರೆಲ್ಲರೂ ಜೆಸ್ಕಾಂ ಕಚೇರಿ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಸ್ಕಾಂ ಎಇಇ ರಾಜೇಶ್, ಎಸ್.ಓ ಮಡಿವಾಳಪ್ಪ ಅವರು ಮಾತನಾಡಿ ಲೈನ್ ಮೆನ್ ಗಳ ಕೊರತೆ ಇದೆ ಹೀಗಾಗಿ ತೊಂದರೆ ಆಗುತ್ತಿದೆ ಬರುವ 15 ದಿನಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎರಡ್ಮೂರು ದಿನಕ್ಕೆ ನೀರು ಸರಬರಾಜು ಆಗುತ್ತಿರುವುದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಇದನ್ನು ಸರಿಪಡಿಸಿ ನಿತ್ಯ ನೀರು ಪೂರೈಕೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪಟ್ಟಣದಲ್ಲಿನ ರಸ್ತೆಗಳಿಗೆ ನಾಮಫಲಕಗಳು ಹಾಕಬೇಕು ಎಂದು ಹೇಳಿ 4 ವರ್ಷ ಆದರೂ ಇಲ್ಲಿವರೆಗೆ ಆಗಿಲ್ಲ ಎಂದು ಚಂದ್ರಶೇಖರ ಕಾಶಿ ಬೇಸರ ವ್ಯಕ್ತಪಡಿಸಿದಾಗ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ಉತ್ತರಿಸಿದರು.
ಪುರಸಭೆಯಲ್ಲಿ ಪ್ರಜೆಗಳ ಸೇವೆ ನಡೆಯುತ್ತಿಲ್ಲ ದಲ್ಲಾಳಿಗಳ ಮತ್ತು ಫೈರಿಗಳ ಸೇವೆ ನಡೆಯುತ್ತದೆ ದುಡ್ಡು ಕೊಟ್ಟರೆ ಕೆಲಸಗಳು ಆಗುತ್ತಿವೆ ಎಂದು ಸದಸ್ಯ ನಾಗರಾಜ್ ಭಂಕಲಗಿ ಗಂಭೀರವಾಗಿ ಆರೋಪಿಸಿದರು. ನಮ್ಮ ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬಂದಿದೆ ಆದರೂ ನಮ್ಮ ವಾರ್ಡ್ ನಲ್ಲಿ ಕೆಲಸಗಳು ಆಗಿಲ್ಲ, ಪ್ರತಿ ಸಾಮಾನ್ಯ ಸಭೆಯಲ್ಲಿ ಎಷ್ಟೇ ಕಿರಿಚಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ಪಾಶಾಮಿಯ್ಯಾ ಖುರೇಷಿ ತಮ್ಮ ಆಕ್ರೋಶ ಹೊರಹಾಕಿದರು.
ಸಾಮಾನ್ಯ ಸಭೆಯ ವರದಿಯಲ್ಲಿ ಆಂಗ್ಲ ಭಾಷೆ ಬಳಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಸರ್ಕಾರದ ಆಡಳಿತದಲ್ಲಿ ಪೂರ್ಣ ಪ್ರಮಾಣದ ಕನ್ನಡ ಭಾಷೆ ಬಳಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಹೀಗಾಗಿ ವರದಿಯಲ್ಲಿ ಕನ್ನಡ ಭಾಷೆ ಇರುವಂತೆ ಗಮನ ಹರಿಸಬೇಕು ಎಂದು ಸದಸ್ಯ ರಮೇಶ್ ಬೊಮ್ಮನಳ್ಳಿ ಹೇಳಿದರು. ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯೆ ನೀಡಿ ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ, ಸಂತೋಷ ಚೌದರಿ, ಶಾಮಣ್ಣ ಮೇಧಾ, ಸುಮಂಗಲಾ ಸಣ್ಣೂರಕರ್, ಕಾಶಿಬಾಯಿ ಬೆಣ್ಣೂರಕರ್, ಶಹನಾಜ್ ಬೇಗಂ ಮಹ್ಮದ್ ಯಕ್ಬಾಲ್, ಬೇಬಿ ಸುಭಾಷ್ ಜಾಧವ, ಸುಶೀಲಾ ದೇವಸುಂದರ, ಅಧಿಕಾರಿಗಳಾದ ಕ್ರಾಂತಿ ದೇವಿ, ಲೋಹಿತ್, ಶರಣು, ರವಿಶಂಕರ, ಮಲ್ಲಿಕಾರ್ಜುನ, ಮುತ್ತಣ್ಣ ಸೇರಿದಂತೆ ಸಿಬ್ಬಂಧಿಗಳು ಉಪಸ್ಥಿತರಿದ್ದರು.

