ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗಲೇ ಖರ್ಗೆ ಕುಟುಂಬದ ಬೌದ್ಧಿಕ ಮಟ್ಟ ಕುಸಿದಿದೆ: ಬೆಣ್ಣೂರಕರ್ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ವಾಟ್ಸಾಪ್ ಸ್ಟೇಟಸ್ ಹಾಕಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮೇಲೆ ಕಾಂಗ್ರೆಸ್ ಪುರಸಭೆ ಮಾಜಿ ಸದಸ್ಯ ಪೃಥ್ವಿರಾಜ್ ಹಲ್ಲೆ ಮಾಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯಾರಿ ಆರೋಗ್ಯ ವಿಚಾರಿಸಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹುಡುಗರ ಜಗಳಕ್ಕೆ ವಿರೋಧ ಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದು ಹೇಳಿರುವುದಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಪ್ರತಿಕ್ರಿಯೆ ನೀಡಿ, ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದಾಗಲೇ ಖರ್ಗೆ ಕುಟುಂಬದ ಬೌದ್ಧಿಕ ಮಟ್ಟ ಕುಸಿದಿದೆ ಹೊರತು ಬಿಜೆಪಿ ಮುಖಂಡರ, ಕಾರ್ಯಕರ್ತರ ಬೌದ್ಧಿಕ ಮಟ್ಟ ಕುಸಿದಿಲ್ಲ ಎಂದು ತಿರುಗೇಟು ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಡಿಯಲ್ಲಿ ನಡೆದಿದ್ದು ಹುಡುಗರ ಜಗಳ ಅಲ್ಲ ಬಿಜೆಪಿ ನಗರಾಧ್ಯಕ್ಷ ಸ್ಥಾನದಲ್ಲಿದ್ದ ನಮ್ಮ ಪಕ್ಷದ ಪ್ರಮುಖರು. ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಹಾಗೂ 23 ವಾರ್ಡಗಳ ಹಾಗೂ ಸರಿಸುಮಾರು 30 ಸಾವಿರ ಮತದಾನವಾಗುವ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನ ಮೇಲೆ ಏಕಾಏಕಿ ದಾಳಿ ಆಗಿರುವುದನ್ನು ಹಗುರವಾಗಿ ಮಾತನಾಡಿ ಇಂತಹ ಘಟನೆಗಳನ್ನು ಉತ್ತೇಜಿಸುವ ಕೆಲಸ ಇಲ್ಲಿನ ಸಚಿವರಿಂದ ನಡೆಯತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಹಲ್ಲೆ ಮಾಡಿದ ಹುಡುಗ ಬಂದಿದ್ದಾನಾ ಎಂದು ಕೇಳುವ ಮೂಲಕ ತಮ್ಮ ಘನತೆ ಗೌರವ ಕಳೆದುಕೊಂಡಂತೆ, ಆತನ ಮೇಲೆ ನಾಲ್ಕೈದು ಕೇಸುಗಳು ಇರುವನನ ಬಗ್ಗೆ ಸಚಿವರು ನೆನಪಿಸುತ್ತಾರೆ ಎಂದರೆ ವಿಪರ್ಯಾಸ ಎಂದರು. ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ರಾಷ್ಟ್ರೀಯ ಅಂತಾರಾಷ್ಟ್ರೀಯ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ವಾಡಿ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಲಿ ಎಂದು ಒತ್ತಾಯಿಸಿದರು. ವಾಡಿ ಪಟ್ಟಣದಲ್ಲಿ 30 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ದೇಶಾಭಿಮಾನ ಹಾಗೂ ದೇಶಭಕ್ತಿ ಇರುವ ಆರ್.ಎಸ್.ಎಸ್ ಸಂಘಟನೆಯ ಬಗ್ಗೆ ಸಚಿವರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ, ತಾಕತ್ ಇದ್ದರೆ ನಿಷೇಧ ಮಾಡಲಿ ನೋಡೋಣ ಎಂದು ಸವಾಲ್ ಹಾಕಿದರು. ಆರ್.ಎಸ್.ಎಸ್ ನವರು ಎಲ್ಲಾ ಪಕ್ಷಗಳಲ್ಲಿ ಇದ್ದಾರೆ ಅದರ ಶಕ್ತಿ ಏನಿದೆ ಎಂಬುದನ್ನು ತೆಲಂಗಾಣ ಸಿಎಂ ರೇವಂತರೆಡ್ಡಿ ಅವರಿಗೆ ಕೇಳಿ ತಿಳಿದುಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ರಮೇಶ್ ಬೊಮ್ಮನಳ್ಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ವಕ್ತಾರ ಶಿವರಾಮ ಚವ್ಹಾಣ ಇದ್ದರು.

