ಚಿತ್ತಾಪುರ ಆರ್.ಎಸ್.ಎಸ್ ಪಥಸಂಚಲನ ನಿಮಿತ್ತ ಶಾಂತಿ ಸಭೆ | ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ವಯ ಪಥಸಂಚಲನ ನಡೆಸಿ ತಾಲೂಕು ಆಡಳಿತಕ್ಕೆ ಸಹಕರಿಸಿ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಕೆಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿದೆ. ಹೀಗಾಗಿ ಆ ಷರತ್ತುಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಿಮಿತ್ತ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸೂಫಿಸಂತರ ನಾಡು ಚಿತ್ತಾಪುರ ಶಾಂತಿಗೆ ಹೆಸರಾದ ತಾಲೂಕು ಇಲ್ಲಿನ ಜನರು ಶಾಂತಿಪ್ರಿಯರು ತಾಲೂಕು ಆಡಳಿತಕ್ಕೆ ಪೊಲೀಸ್ ಇಲಾಖೆಗೆ ಯಾವತ್ತೂ ಸಹಕರಿಸುವ ಮನೋಭಾವ ಹೊಂದಿದವರಾಗಿದ್ದಾರೆ ಎಂದು ಬಣ್ಣಿಸಿದರು.
ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಆರ್.ಎಸ್.ಎಸ್ ಪಥಸಂಚಲನ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ಬಹು ಪ್ರಾಮುಖ್ಯತೆ ಪಡೆದಿತ್ತು. ತಾಲೂಕು ಬಿಟ್ಟು ಹೊರಗಡೆ ಎಷ್ಟೇಲ್ಲಾ ಬೆಳವಣಿಗೆ ಚರ್ಚೆಗಳು ನಡೆದರೂ ಇಲ್ಲಿನ ಜನರು ಮಾತ್ರ ಯಾವುದೇ ಹದ್ದು ಮೀರಿ ಮಾತನಾಡದೇ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡುವ ಮೂಲಕ ಉತ್ತರ ನೀಡಿದ್ದಾರೆ. ಈಗ ನವೆಂಬರ್ 16 ರಂದು ನಡೆಯಲಿರುವ ಪಥಸಂಚಲನಕ್ಕೆ ಎಲ್ಲರೂ ಸಹಕರಿಸುವ ಮೂಲಕ ಚಿತ್ತಾಪುರ ಶಾಂತಿ ಸೌಹಾರ್ದತೆಯ ತಾಲೂಕು ಎಂದು ಸಾಬೀತು ಪಡಿಸಬೇಕು ಎಂದು ಹೇಳಿದರು.
ಆರ್.ಎಸ್.ಎಸ್ ಪಥಸಂಚಲನ ಕುರಿತು ಜಿಲ್ಲೆ, ರಾಜ್ಯ ಸೇರಿದಂತೆ ದೇಶಾದ್ಯಂತ ಎಷ್ಟೇ ಚರ್ಚೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಕೆಟ್ಟ ಕಾಮೆಂಟ್ಸ್ ಗಳು ಆದರೂ ಚಿತ್ತಾಪುರದ ಜನತೆ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸಹನೆ ಮತ್ತು ತಾಳ್ಮೆಯಿಂದ ಇರುವ ಮೂಲಕ ತಾಲೂಕು ಆಡಳಿತಕ್ಕೆ ಸಹಕಾರ ನೀಡಿ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಪಥಸಂಚಲನಕ್ಕೆ ಹೈಕೋರ್ಟ್ ವಿಧಿಸಿದ್ದ ಶರತ್ತುಗಳು :
ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಗರಿಷ್ಠ 300 ಜನರಿಗೆ ಸಿಮಿತಗೊಳಿಸಲಾಗಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಯಂ ಸೇವಕರು ಚಿತ್ತಾಪುರ ಕಂದಾಯ ತಾಲೂಕಿನವರಾಗಿರಬೇಕು, ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ 50 ಜನರಿಗೆ ಮಾತ್ರ ಬ್ಯಾಂಡ್ ನೊಂದಿಗೆ ಹಾಜರಾಗಲು ಅವಕಾಶವಿದೆ, ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಕಾರ್ಯಕ್ರಮ ನಡೆಸುವ ಒಂದು ದಿನದ ಮೊದಲು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು, ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರ ನಡುವೆ ನಡೆಸಿ ಪೂರ್ಣಗೊಳಿಸಬೇಕು ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕು ಪಂಚಾಯತ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ವೃತ್ತದಿಂದ ಮರಳಿ ಬಜಾಜ್ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥ ಸಂಚಲನ ಕೈಗೊಳ್ಳುವುದು. ಬೇರೆ ಯಾವುದೇ ಮಾರ್ಗಗಳನ್ನು ಬಳಸುವಂತಿಲ್ಲ, ಈ ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿಯೇ ಕಟ್ಟು ನಿಟ್ಟಾಗಿ ನಡೆಸಬೇಕು ಮತ್ತು ಮಾರ್ಗ ನಕ್ಷೆ ಪ್ರಕಾರ ಕಾರ್ಯಕ್ರಮ ಹೊರತುಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳು, ಬೀದಿಗಳಲ್ಲಿ ಯಾವುದೇ ಭಾಷಣಗಳು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು, ಕಾರ್ಯಕ್ರಮದ ಆಯೋಜಕರು, ಭಾಗವಹಿಸುವವರು, ಆಹ್ವಾನಿತರು ಯಾವುದೇ ರಾಜಕೀಯ ಭಾಷಣಗಳನ್ನು ಮಾಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಭಾಷೆ ಅಥವಾ ಘೋಷಣೆಗಳನ್ನು ಬಳಸಬಾರದು, ಈ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳುವ ಮತ್ತು ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದಂತೆ ನೋಡಿಕೊಳ್ಳುವ ಹತ್ತು ಜನ ವ್ಯಕ್ತಿಗಳು, ನಾಯಕರ, ಸಂಘಟಕರ ಪಟ್ಟಿಯನ್ನು ಅವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಪೊಲೀಸ್ ಇಲಾಖೆಗೆ ನೀಡಬೇಕು, ಧ್ವಜಗಳು, ಬ್ಯಾನರ್ ಗಳು ಬಂಟಿಂಗ್‌ಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಹಾಗೂ ಬ್ಯಾನರ್ ಮತ್ತು ಬಂಟಿಂಗ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು, ಸಮಾರಂಭದ ಆಯೋಜಕರು ಹಾಗೂ ಭಾಗವಹಿಸವವರು ಕಾರ್ಯಕ್ರಮಕ್ಕೆ ಸಂಭಂದಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು.
ಸಿಪಿಐ ಚಂದ್ರಶೇಖರ ತಿಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಓದಿ ಹೇಳಿದರು. ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪಿಎಸ್ಐ ಸಿದ್ದಲಿಂಗ ಮಾಡಬೂಳ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ಜಗದೀಶ್ ಚವ್ಹಾಣ, ಸಂತೋಷ ಚೌದರಿ, ಮುಖಂಡರಾದ ಬಸವರಾಜ ಬೆಣ್ಣೂರಕರ್, ಮುಕ್ತಾರ್ ಪಟೇಲ್, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಆನಂದ ಪಾಟೀಲ ನರಿಬೋಳ, ಅಂಬರೀಷ್ ಸುಲೇಗಾಂವ, ಕೋಟೇಶ್ವರ ರೇಷ್ಮಿ, ಪ್ರಲ್ಹಾದ ವಿಶ್ವಕರ್ಮ, ಮಹಾದೇವ ಅಂಗಡಿ, ಧನರಾಜ್ ದೇಶಪಾಂಡೆ, ಅಹ್ಮದ್ ಸೇಟ್, ಖಾಸಿಂ ಸೇಟ್, ಬಾಬು ಕಾಶಿ, ಉದಯಕುಮಾರ್ ಸಾಗರ, ಗೋಪಾಲ ರಾಠೋಡ, ಸಂತೋಷ ಹಾವೇರಿ, ಭೀಮರಾಯ ಹೊತಿನಮಡಿ, ಅನೀಲ್ ವಡ್ಡಡಗಿ, ಮಲ್ಲಿಕಾರ್ಜುನ ಬೆಣ್ಣೂರಕರ್, ನಿಂಗಣ್ಣ ಹೆಗಲೇರಿ, ರಾಮಲಿಂಗ ಬಾನರ್, ನಾಗರಾಜ ರೇಷ್ಮಿ, ಸುರೇಶ್ ಗುತ್ತೇದಾರ, ಕರಣಕುಮಾರ್ ಅಲ್ಲೂರ, ಪ್ರಭು ಹಲಕರ್ಟಿ, ಖಾಜಾ ಬಾದಲ್, ಸಾಬಣ್ಣ ಹೋಳಿಕಟ್ಟಿ, ಸೂರಜ್ ಕಲ್ಲಕ್, ರಾಮು ಹರವಾಳ, ದತ್ತು ಜಾನೆ ಸೇರಿದಂತೆ ಇತರರು ಇದ್ದರು. ಪಿಎಸ್ಐ ಮಂಜುನಾಥ ರೆಡ್ಡಿ ನಿರೂಪಿಸಿ ವಂದಿಸಿದರು.

