ಚಿತ್ತಾಪುರ ತಾಲೂಕನ್ನು ಬರಪೀಡಿತ ಪ್ರದೇಶ ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ಪರಿಹಾರಕ್ಕೆ ಬಿಜೆಪಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ನೇತೃತ್ವದಲ್ಲಿ ಮುಖಂಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಕಳೆದ ವರ್ಷ ಮಾಡಿದ ಇನ್ಸೂರೆನ್ಸ್ ಹಣ್ಣ ಇನ್ನೂ ಕೂಡ ಬಂದಿರುವುದಿಲ್ಲ. ಈಗಾಗಲೇ ರೈತರು ಬಿತ್ತಿದ ಬೆಳೆ ಹೆಸರು, ಉದ್ದು, ತೊಗರಿ, ಎಲ್ಲ ಬೆಳೆ ಮಳೆ ಇಲ್ಲದೆ ಒಣಗಿ ಹೋಗ್ತಿವೆ. ಈಗ ಸರ್ಕಾರ ಬರಗಾಲ ಘೋಷಣೆ ಮಾಡಬೇಕು ಸಾಕಷ್ಟು ಸಾಲ ಮಾಡಿ ಡಿಎಪಿ, ರಸಗೊಬ್ಬರ, ಹೆಸರು, ಬೀಜ ತೊಗರಿ, ಬೀಜ, ಸಾಲ ಮಾಡಿ ತಂದು ಬಿತ್ತನೆ ಮಾಡಿದ್ದ ರೈತರು ಮುಗಿಲು ನೋಡುವ ಪರಿಸ್ಥಿತಿ ಆಗಿದೆ ಎಂದು ಹೇಳಿದರು.
ಕಳೆದ ವರ್ಷ ಅಧಿಕ ಮಳೆಯಿಂದ ಹಸಿ ಬರಗಾಲ ಆಗಿ ರೈತರಿಗೆ ಒಳ್ಳೆಯ ಬೆಲೆ ನಿರೀಕ್ಷೆಯಲ್ಲಿದ್ದ ರೈತರು ಕಂಗಲಾಗಿದ್ದಾರೆ. ಈ ವರ್ಷ ಮಳೆ ಬರದೆ ಕಂಗಲಾಗಿದ್ದಾರೆ ಸತತ ಎರಡು ವರ್ಷ ರೈತರಿಗೆ ಹಸಿ ಬರಗಾಲ, ಒಣ ಬರಗಾಲ ಇದರಿಂದ ರೈತರು ಸಾಕಷ್ಟು ಸಾಲ ಮಾಡಿರುತ್ತಾರೆ. ಜಾನುವಾರುಗಳು ಮೇವಿಲ್ಲದೆ ಕಸಾಯ ಖಾನೆಗೆ ಮಾರಾಟ ಮಾಡುತ್ತಿದ್ದಾರೆ ಹಾಗೂ ಕಳೆದ ವರ್ಷದಿಂದ ಸಿಮೆಂಟ್ ಕಂಪನಿಗಳಿಗೆ ರೈತರ ಜಮೀನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜಮೀನು ಕೊಟ್ಟ ರೈತರಿಗೆ ನೌಕರಿ ಕೊಡದೆ ಉತ್ತರ ಪ್ರದೇಶ, ಬಿಹಾರ, ಓಡಿಸಾ ರಾಜ್ಯಗಳಿಂದ ಬಂದು ಚಿತ್ತಾಪುರ ತಾಲೂಕಿನ ಸಿಮೆಂಟ್ ಹಾಗೂ ಈ ಇನ್ನಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಜಮೀನು ಕಳೆದುಕೊಂಡ ರೈತರಿಗೆ ನೌಕರಿ ಮೇಲೆ ತೆಗೆದುಕೊಳ್ಳುತ್ತಿಲ್ಲಾ. ರೈತರ ಜೀವ ಹೀಗೆ ಸರ್ಕಾರ ರೈತರ ಕೈ ಹಿಡಿಯದೆ ಹೋದರೆ ರೈತರ ಆತ್ಮಹತ್ಯೆ ಬಿಟ್ಟು ಬೇರೇ ಮಾರ್ಗನೆ ಇಲ್ಲ ಎಂಬತ್ತಾಗಿದೆ ಎಂದು ಹೇಳಿದರು.
ಮುಂಗಾರು ಮಳೆ ಬಾರದಿರುವುದರಿಂದ ಬಿತ್ತಿದ ಬೆಳೆ ಹಾಳಾಗಿ ರೈತರ ಸ್ಥಿತಿ ದಾರುಣವಾಗಿದೆ. ಭೂಮಿಗೆ ನೀರಿಲ್ಲಾದಿರುವುದರಿಂದ ಸಹಜವಾಗಿ ಪಶುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಪಶುಗಳ ಪಾಲನೆ ಸಾಧ್ಯವಾಗದೆ ರೈತರು ಸಂತೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಭವಿಷ್ಯದ ಬೆಳೆಯ ಲಾಭ ಬಾರದಿದ್ದರೂ, ಈಗಾಗಲೇ ಸಾಲ ಮಾಡಿ ಬಿತ್ತಿದ ಬೀಜಗಳು ಮಳೆ ಇಲ್ಲದೆ ಹಾಳಾಗಿ ಹೋಗಿದ್ದು ರೈತನು ಪರಿಹಾರ ಕಾಣದೇ ಕಂಗಾಲಾಗಿದ್ದಾನೆ ಎಂದು ತಿಳಿಸಿದರು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಳುವ ಸರ್ಕಾರ ಉಳುವ ರೈತನ ಬೆನ್ನಿಗೆ ನಿಂತು ಪ್ರತಿ ಎಕರೆಗೆ 50 ಸಾವಿರ ಪರಿಹಾರ ಹಣ ನೀಡಲು ಘೋಷಣೆ ಮಾಡಬೇಕು. ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ರೈತರಿಗೆ ಭರವಸೆಯಾಗಬೇಕು ಎಂದು ಹೇಳಿದರು.
ಒಂದು ವೇಳೆ ರೈತರ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆಹರಿಸದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪ್ರಮುಖರಾದ ಪ್ರಭು ಗಂಗಾಣಿ, ಶಾಮ್ ಮೇಧಾ, ತಿಮ್ಮಣ್ಣ ಡಿಗ್ಗಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ದಶರಥ್ ದೊಡ್ಡಮನಿ, ರಾಜು ದೊರೆ, ಸಂಗಮೇಶ ಪಾಟೀಲ, ಶಿವರಾಮ್ ಚವ್ಹಾಣ ಸೇರಿದಂತೆ ಇತರರು ಇದ್ದರು.

