ದಂಡೋತಿ ವಸತಿ ಶಾಲೆಯ ಪ್ರಕರಣ | ಅಗ್ಗದ ಪ್ರಚಾರ ಪಡೆಯಲು ಬಿಜೆಪಿ ಮುಖಂಡರು ದಂಡೋತಿ ಗ್ರಾಮಕ್ಕೆ: ತಿಮ್ಮನಾಯಕ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಲ್ಲಿ ಬಿಜೆಪಿ ಮುಖಂಡರು ಅಗ್ಗದ ಪ್ರಚಾರ ಪಡೆಯಲು ದಂಡೋತಿ ಗ್ರಾಮದ ವಸತಿ ಶಾಲೆಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ್ ತಿಮ್ಮನಾಯಕ ತಿರುಗೇಟು ನೀಡಿದರು.
ತಾಲೂಕಿನ ದಂಡೋತಿ ಗ್ರಾಮದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಾಂಗ್ರೆಸ್ ಮುಖಂಡರ ನಿಯೋಗ ಗುರುವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ದಂಡೋತಿ ಗ್ರಾಮದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರದ ಹಿಂದೆ ನಡೆದ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಕ್ಷಣ ಸ್ಪಂದಿಸಿದ್ದರಿಂದಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ಪರಿಹಾರೋಪಾಯ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ ಆದರೂ ಬಿಜೆಪಿ ಮುಖಂಡರು ಸುಖಾಸುಮ್ಮನೆ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಅಸ್ವಸ್ಥಗೊಂಡ ಪ್ರಕರಣಕ್ಕೆ ಹಾಗೂ ಬಿಜೆಪಿ ಮುಖಂಡರಿಗೆ ಯಾವುದೇ ಸಂಬಂಧವೇ ಇಲ್ಲ, ವಿಷಪೂರಿತ ಆಹಾರ ಎಂದರೆ ಏನರ್ಥ ವಸತಿ ಶಾಲೆಯವರೇನು ಎಲ್ಲರಿಗೂ ವಿಷಪೂರಿತ ಆಹಾರ ನೀಡುತ್ತಾರೇನು ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿಯವರು ಎಲ್ಲಿಂದಲೋ ಬಂದು ದಂಡೋತಿ ಗ್ರಾಮದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ಬಣ್ಣ ಹಚ್ಚುವ ಕೆಟ್ಟ ಕೆಲಸ ಮಾಡಬೇಡಿ ಎಂದರು. ಮಕ್ಕಳು ಭಯಪಡುವ ಅಗತ್ಯವಿಲ್ಲ, ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ರಮೇಶ್ ಕವಡೆ ಮಾತನಾಡಿ, ಮಕ್ಕಳ ಓದಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿದುಕೊಂಡು ಗ್ರಾಮದ ಮುಖಂಡರು ನಾವಾರು ವಸತಿ ಶಾಲೆಗೆ ಬಂದಿಲ್ಲ, ಆದರೆ ಬಿಜೆಪಿ ಮುಖಂಡರು ಇಲ್ಲಿಗೆ ಆಗಮಿಸಿ ಸುದ್ದಿಗೋಷ್ಠಿ ಮಾಡಿದ್ದಾರೆ, ಇದೇ ಕೊನೆ ಮತ್ತೇ ಬಂದರೆ ನಾವು ಅದಕ್ಕೆ ತಕ್ಕ ಉತ್ತರ ಕೊಡಲು ಸಿದ್ಧ ಎಂದು ಎಚ್ಚರಿಸಿದರು.
ದಂಡೋತಿ ಕಾಂಗ್ರೆಸ್ ಭದ್ರಕೋಟೆ ಆಗಿದ್ದರಿಂದ ಇದನ್ನು ಛಿದ್ರ ಮಾಡಲು ಬಿಜೆಪಿ ಮುಖಂಡರು ಇಲ್ಲಿಗೆ ಬಂದು ವಸತಿ ಶಾಲೆಯ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಇದು ಇಲ್ಲಿ ನಡೆಯಲ್ಲ ಎಂದು ಉತ್ತರಿಸಿದರು.
ಕಾಂಗ್ರೆಸ್ ಮುಖಂಡ ಸಾಬಣ್ಣ ಭರಾಟೆ ಮಾತನಾಡಿ, ಈಗಾಗಲೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಆದರೂ ಜಿಲ್ಲಾ ಹಾಗೂ ತಾಲೂಕು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಒತ್ತಾಯಿಸುತ್ತಿರುವುದು ನೋಡಿದರೆ ಬಿಜೆಪಿ ಮುಖಂಡರಿಗೆ ಶಾಂತಿ ಬೇಕಾಗಿಲ್ಲ ಅಶಾಂತಿ ಬೇಕಾಗಿದೆ. ಘಟನೆ ಜರುಗಿ ಒಂದು ವಾರ ಕಳೆದಿದೆ ಬಿಜೆಪಿಯವರಿಗೆ ಈಗ ಜ್ಞಾನೋದಯ ಆಗಿದೆ, ಬಿಜೆಪಿ ಮುಖಂಡರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಬಂದಿಲ್ಲ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕೆ ಮಾಡಲು ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಡಾ.ದಾವುದ್ ಪಟೇಲ್ ಮಾತನಾಡಿದರು. ತಾಪಂ ಮಾಜಿ ಸದಸ್ಯ ಮುನಿಯಪ್ಪ ಕೊಳ್ಳಿ, ಕಾಂಗ್ರೆಸ್ ಅಧ್ಯಕ್ಷ ರಷೀದ್ ಪಠಾಣ್, ಮುಖಂಡರಾದ ಶಂಕರ ಕೊಳ್ಳಿ, ದೇವದಾಸ್, ಶರೀಫ್ ತೋಶವಾಲೆ, ಇಸಾಕ್ ಜಲೀಲ್, ಕಂಟೇಪ್ಪ ಮೂಕೆ, ನಾಗು ಭರಾಟೆ, ರವಿ ರಂಗಪ್ಪ, ವೆಂಕಟೇಶ್, ವಾಹೇದ್ ಸೇರಿದಂತೆ ಇತರರು ಇದ್ದರು.

