ತಾಲೂಕು ಆಡಳಿತ ವತಿಯಿಂದ ಸಂವಿಧಾನ ದಿನಾಚರಣೆ | ಅಂಬೇಡ್ಕರ್ ಅವರ ಕೊಡುಗೆ ಸ್ಮರಿಸುವುದು ಸಂವಿಧಾನ ದಿನಾಚರಣೆ ಮುಖ್ಯ ಉದ್ದೇಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದು ಸಂವಿಧಾನ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಕೌಸರ್ ಬಾನು ಹೇಳಿದರು.
ಪಟ್ಟಣದ ಪ್ರಜಾ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳು ಮತ್ತು 11 ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದೂ ಹೇಳಿದೆ. ಭಾರತದ ಪ್ರಜೆಗಳಾದ ನಾವು..ಎಂದು ಆರಂಭವಾಗುವ ಪ್ರಸ್ತಾವನೆಯು, ಸಂವಿಧಾನದ ಆಶಯಗಳನ್ನು, ಸಾರವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು, ನಾಗರಿಕರ ಹಕ್ಕುಗಳು, ನ್ಯಾಯ-ಸ್ವಾತಂತ್ರ್ಯ-ಸಮಾನತೆಯ ಮೌಲ್ಯಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ತಾಪಂ ಸಹಾಯಕ ನಿರ್ದೇಶಕ ಪಂಡಿತ್ ಶಿಂಧೆ, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರೆ, ಟಿಪಿಒ ಶಿವಶರಣಪ್ಪ ಮಂಠಾಳೆ, ಮಲ್ಲಿಕಾರ್ಜುನ ಸೇಡಂ, ಸುನೀಲ್ ಯನಗುಂಟಿಕರ್, ವಿಠಲ್ ರಾವ್ ಸೇರಿದಂತೆ ಇತರರು ಇದ್ದರು. ಪಶು ವೈದ್ಯಾಧಿಕಾರಿ ಡಾ. ಶಂಕರ ಕಣ್ಣಿ ನಿರೂಪಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

