Oplus_131072

ಚಿತ್ತಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆ, ಪೂರ್ಣ ಮಾಹಿತಿ ಜೊತೆಗೆ ಪ್ರಗತಿ ವರದಿ ತರಲು ಆಡಳಿತಾಧಿಕಾರಿ ಸೂಚನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಮಟ್ಟದ ಅಧಿಕಾರಿಗಳು ಸಾಮಾನ್ಯ ಸಭೆಗೆ ಬರುವಾಗ ಅಪೂರ್ಣ ಮಾಹಿತಿ ತರದೆ ಪೂರ್ಣ ಮಾಹಿತಿ ಜೊತೆಗೆ ಪ್ರಗತಿ ವರದಿ ತರಬೇಕು ಎಂದು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮುನಾವರ್ ದೌಲಾ ಸೂಚಿಸಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ಸಭೆಗೆ ಬರುವಾಗ ಸ್ವಷ್ಟ ವರದಿಯೊಂದಿಗೆ ಬರಬೇಕು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಿದ್ದರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಸಿಡಿಪಿಒ ಆರತಿ ತುಪ್ಪದ್ ತಮ್ಮ ಇಲಾಖೆಯ ವರದಿ ನೀಡುತ್ತಾ, ತಾಲೂಕಿನಲ್ಲಿ 273 ಅಂಗನವಾಡಿ ಕೇಂದ್ರಗಳಿವೆ ಅದರಲ್ಲಿ 53 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಕಾಳಗಿ ಮತ್ತು ಚಿತ್ತಾಪುರ ಪಟ್ಟಣದಲ್ಲಿ ಸಿಎ ಸೈಟ್ ಮಂಜೂರಿಯಾಗಿದೆ ಎಂದು ಹೇಳಿದರು. 2006 ರಲ್ಲಿ ಭಾಗ್ಯಲಕ್ಷ್ಮಿ 1305 ಫಲಾನುಭವಿಗಳು ನೋಂದಣಿ ಮಾಡಿದ್ದಾರೆ ಅದರಲ್ಲಿ 672 ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಕಳುಹಿಸಿ ಕೊಡಲಾಗಿದೆ ಈಗಾಗಲೇ 51 ಫಲಾನುಭವಿಗಳ ಬ್ಯಾಂಕ್ ಖಾತೆಗೆ 34 ಸಾವಿರ ಹಣ ಜಮಾವಾಗಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜೂರಾದ ಹುದ್ದೆಗಳು 1489, ಕಾರ್ಯನಿರ್ವಹಿಸುತ್ತಿರುವುದು 1094, ಖಾಲಿ ಹುದ್ದೆಗಳು 396, ಅತಿಥಿ ಶಿಕ್ಷಕರು 253 ಹಾಗೂ ಪ್ರೌಢ ಶಾಲೆಯಲ್ಲಿ ಮಂಜೂರಾದ ಹುದ್ದೆಗಳು 537, ಕಾರ್ಯನಿರ್ವಹಿಸುತ್ತಿರುವುದು 425, ಖಾಲಿ ಹುದ್ದೆಗಳು 112, ಅತಿಥಿ ಶಿಕ್ಷಕರು 76 ಇದ್ದಾರೆ ಇನ್ನೂ ಎರಡು ದಿನದಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.40.88 ಬಂದಿದೆ, ಕಳೆದ ಬಾರಿಗಿಂತ ಶೇ.10 ಫಲಿತಾಂಶ ಕಡಿಮೆ ಬಂದಿದೆ ಇದಕ್ಕೆ ಹಲವು ಕಾರಣಗಳು ಇವೆ. ಈಗ ಮುಂದಿನ ಬಾರಿ ಫಲಿತಾಂಶ ಸುಧಾರಣೆಗಾಗಿ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ, ಬ್ರಿಜ್ ಕೋರ್ಸ್ ಮಾಡಲಾಗಿದೆ ಎಂದು ಹೇಳಿದರು. ಶಹಾಬಾದ ಆಜಿಂ ಉರ್ದು ಶಾಲೆ ಹಾಗೂ ಕೊಡದೂರಿನ ಕಂಠಿ ಬಸವೇಶ್ವರ ಶಾಲೆ ಈ ಎರಡು ಶಾಲೆಗಳಲ್ಲಿ ಜೀರೋ ಫಲಿತಾಂಶ ಬಂದಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಮಾತನಾಡಿ, ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚಿತ್ತಾಪುರ, ವಾಡಿ, ಶಹಾಬಾದ, ಕಾಳಗಿ, ಗುಂಡಗುರ್ತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಸಭೆಯಲ್ಲಿ 2025-26 ನೇ ಸಾಲಿನ ಇಲಾಖಾವಾರು ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು. 2024-25ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ಬಂಧಿತ ಅಭಿವೃದ್ಧಿ ಅನುದಾನದ ಕಾಮಗಾರಿಗಳ ಬದಲಾವಣೆಯ ಘಟನೋತ್ತರ ಮಂಜೂರಾತಿ ನೀಡುವ ಕುರಿತು, 2025-26 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆ ತಯಾರಿಸುವ ಮತ್ತು ಅನುಮೋದನೆ ನೀಡುವ ಕುರಿತು, 2025-26 ನೇ ಸಾಲಿನ ಇಲಾಖಾವಾರು ಲಿಂಕ್ ಡಾಕ್ಯುಮೆಂಟ್ ಕ್ರಿಯಾ ಯೋಜನೆಗಳ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಶಹಾಬಾದ ಇಒ ಮಲ್ಲಿನಾಥ ರಾವೂರ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಪಶು ಅಧಿಕಾರಿ ಡಾ.ಶಂಕರ ಕಣ್ಣಿ, ಪಂಡಿತ್ ಸಿಂದೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!