ಚಿತ್ತಾಪುರ ಬಸವ ಜಯಂತಿ ದಿನದಂದು ವೀರಶೈವ ಕಲ್ಯಾಣ ಮಂಟಪಕ್ಕೆ ಅಡಿಗಲ್ಲು: ರಮೇಶ್ ಮರಗೋಳ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರ ನಿರ್ಣಯದಂತೆ ಬಸವ ಜಯಂತಿ (ಏ.20) ದಿನದಂದು ಪಟ್ಟಣದ ಸ್ಟೇಷನ್ ರಸ್ತೆಯ ವೀರಶೈವ ಸಮಾಜದ ನಿವೇಶನದಲ್ಲಿ ಮಧ್ಯಾಹ್ನ 1 ಗಂಟೆಗೆ ವೀರಶೈವ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ಹೇಳಿದರು.
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ದಿನಗಳಿಂದ ಹಾಗೂ ತಾಂತ್ರಿಕ ಕಾರಣದಿಂದ ವೀರಶೈವ ಕಲ್ಯಾಣ ಮಂಟಪ ಕಾಮಗಾರಿ ನೆನೆಗುದಿಯಲ್ಲಿತ್ತು. ಈಗ ಎಲ್ಲಾ ತೊಡಕುಗಳು ನಿವಾರಣೆಯಾಗಿದ್ದು. ವೀರಶೈವ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಬಸವ ಜಯಂತಿ ದಿನದಂದು ಅಡಿಗಲ್ಲು ಹಾಕಲಾಗುತ್ತದೆ ಎಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವೀರಶೈವ ಸಮಾಜದ ಮುಖಂಡರ ದೇಣಿಗೆಯಿಂದ ಕಲ್ಯಾಣ ಮಂಟಪದ ಕಾರ್ಯ ನಡೆಯಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ವೀರಶೈವ ಸಮಾಜಕ್ಕೆ ಹಸ್ತಾಂತರ ಮಾಡಲಾಗುವುದು.
ಈಗಾಗಲೇ ವೀರಶೈವ ಲಿಂಗಾಯತ ಸಮಾಜದಡಿ ಬಸವ ಭವನ ನಿರ್ಮಾಣಕ್ಕೆ ಬೇಕಾದ ಜಮೀನು ಹಾಗೂ ಅಗತ್ಯ ಅನುದಾನ ಕುರಿತು ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು ಕೂಡ ಸಕಾರಾತ್ಮಕವಾದ ಭರವಸೆ ನೀಡಿದ್ದಾರೆ. ಬರುವ ದಿನಗಳಲ್ಲಿ ಸುಸಜ್ಜಿತ ಬೃಹತ್ ಮಟ್ಟದ ಬಸವ ಭವನ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ, ಬಸವ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಪ್ರಮುಖರಾದ ಶಿವಲಿಂಗಪ್ಪ ವಾಡೇದ್, ವೀರಣ್ಣಗೌಡ ಪರಸರೆಡ್ಡಿ, ಚಂದ್ರಶೇಖರ ಅವಂಟಿ, ರಾಜಶೇಖರ್ ತಿಮ್ಮನಾಯಕ, ರವೀಂದ್ರ ಸಜ್ಜನಶೆಟ್ಟಿ, ಚಂದ್ರಶೇಖರ ಉಟಗೂರ್, ಜಗಣ್ಣಗೌಡ ರಾಮತೀರ್ಥ, ಶಾಂತಣ್ಣ ಚಾಳೀಕಾರ, ಶಿವರಾಜ್ ಪಾಟೀಲ ಕಲಗುರ್ತಿ, ಆನಂದ ಪಾಟೀಲ ನರಿಬೋಳ, ರವೀಂದ್ರ ರೆಡ್ಡಿ ಭಂಕಲಗಿ, ಓಂಕಾರ ರೇಷ್ಮಿ, ನಾಗುಗೌಡ ಅಲ್ಲೂರ, ರವೀಂದ್ರ ರೆಡ್ಡಿ ಅನ್ನಪೂರ, ಅನಿಲ್ ವಡ್ಡಡಗಿ, ಬಸವರಾಜ ಹೂಗಾರ, ಅಂಬರೀಷ್ ಸುಲೇಗಾಂವ ಇದ್ದರು.

