Oplus_0

ಚಿತ್ತಾಪುರದಲ್ಲಿ ನಾಳೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಹಿತಚಿಂತಕರ ಅಭಿಯಾನ | ವಿಎಚ್ಪಿ ಬೃಹತ್ ಸಂಘಟನೆ: ಹಳ್ಳಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ವಿಶ್ವ ಹಿಂದೂ ಪರಿಷದ್ ವಿಶ್ವದಾದ್ಯಂತ ಇರುವ ಹಿಂದೂ ಸಮಾಜದ ಹಿತ, ಏಕತೆ, ಸಂಘಟನೆ ಹಾಗೂ ಸೇವೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸಂಘಟನೆಯಾಗಿದೆ ಪ್ರಖಂಡ ಅಧ್ಯಕ್ಷ ಶ್ರೀನಿವಾಸ ಹಳ್ಳಿ ತಿಳಿಸಿದ್ದಾರೆ.

ವಿಶ್ವ ಹಿಂದೂ ಪರಿಷದ್ ವತಿಯಿಂದ ಮೂರು ವರ್ಷಕ್ಕೊಮ್ಮೆ ಆಯೋಜಿಸಲಾಗುವ “ಹಿತಚಿಂತಕರ ಅಭಿಯಾನ 2026” ಹಿಂದೂ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಸಮಾಜದ ವಿವಿಧ ಸ್ತರಗಳ ಜನರನ್ನು ಸಂಘಟನೆಯೊಂದಿಗೆ ನೋಂದಾಯಿಸಿಕೊಳ್ಳುವ ವಿಶೇಷ ಅಭಿಯಾನವಾಗಿದ್ದು ನ. 22 ಬೆಳಿಗ್ಗೆ 9.30 ಗಂಟೆಗೆ, ಶ್ರೀ ಕಂಬಳೇಶ್ವ ಮಠದಲ್ಲಿ  ವಿಶ್ವ ಹಿಂದೂ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ಅಂಬರೇಶ ಸುಲೇಗಾಂವ್, ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ ಅವರ ಉಪಸ್ಥಿತಿಯಲ್ಲಿ ಹಾಗೂ ಶ್ರೀ ಸೋಮಶೇಖರ ಶಿವಾಚಾರ್ಯ ಮತ್ತು ಮುಂಬೈನ ಇಸ್ಕಾನ ಮಂದಿರದ ಕುರ್ಮಕೃಪಾ ದಾನ್ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಕಳೆದ 2023 ರಲ್ಲಿ ನಡೆದ ಹಿತಚಿಂತಕರ ಅಭಿಯಾನದಲ್ಲಿ ಭಾರತದಾದ್ಯಂತ 64 ಲಕ್ಷಕ್ಕೂ ಅಧಿಕ ಹಿತಚಿಂತಕರು ನೋಂದಣಿಯಾಗಿದ್ದರು. ಪ್ರಸ್ತುತ 2026 ರ ಅಭಿಯಾನದಲ್ಲಿ ದೇಶಾದ್ಯಂತ 1 ಕೋಟಿ ಹಿತಚಿಂತಕರನ್ನು ನೋಂದಾಯಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಹಿತಚಿಂತಕರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಹಿತಕ್ಕಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಶಾಮುಕ್ತ, ರೋಗಮುಕ್ತ ಹಾಗೂ ಸದೃಢ ಸಮಾಜ ನಿರ್ಮಾಣ, ರೈತರಿಗೆ ಗೋ ಆಧಾರಿತ ಸಾವಯವ ಕೃಷಿಯ ಕುರಿತು ತರಬೇತಿ ಶಿಬಿರಗಳು, ನೀರಿನ ಬಾವಿ, ದೇವಸ್ಥಾನ ಹಾಗೂ ರುದ್ರಭೂಮಿಗಳಲ್ಲಿ ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ದೇಶಾದ್ಯಂತ 7,500 ಕ್ಕೂ ಅಧಿಕ ಸೇವಾ ಕೇಂದ್ರಗಳು ಹಾಗೂ 50,000 ಕ್ಕೂ ಅಧಿಕ ವಿವಿಧ ರೀತಿಯ ಸೇವಾ ಚಟುವಟಿಕೆಗಳು ನಡೆಯುತ್ತಿವೆ. 2025 ರಲ್ಲಿ ಒಂದು ಲಕ್ಷಕ್ಕೂ ಅಧಿಕ ಗೋವುಗಳ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಧರ್ಮಜಾಗೃತಿ, ಧರ್ಮರಕ್ಷಣೆ ಹಾಗೂ ಹಿಂದೂ ಸಮಾಜದ ಸಂಘಟನೆಗಾಗಿ ದೇಶಾದ್ಯಂತ 40,000 ಕ್ಕೂ ಅಧಿಕ ಸತ್ಸಂಗ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

“ಹಿತಚಿಂತಕರ ಅಭಿಯಾನವು ಕೇವಲ ನೋಂದಣಿ ಕಾರ್ಯಕ್ರಮವಲ್ಲ, ಸಮಾಜದ ಹಿತಕ್ಕಾಗಿ ಸೇವೆ, ಸಮರ್ಪಣೆ ಮತ್ತು ಸಂಘಟನೆಯೊಂದಿಗೆ ಕೈಜೋಡಿಸುವ ಮಹತ್ವದ ಅವಕಾಶವಾಗಿದೆ.” ನಮ್ಮ ಚಿತ್ತಾಪುರಿನ ಪ್ರಖಂಡದ ಸುಮಾರು 10,000 ಜನರ ಹಿತಚಿಂತಕ ಅಭಿಯಾನ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಸಮಾಜದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಮಸ್ತ ಹಿಂದೂ ಬಾಂಧವರು ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಿತಚಿಂತಕರಾಗಿ ನೋಂದಾಯಿಸಿಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಮನವಿ ಮಾಡಿದೆ.

Spread the love

Leave a Reply

Your email address will not be published. Required fields are marked *

error: Content is protected !!