ಚಿತ್ತಾಪುರದಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳ ಕೊರತೆ, ರೈತರ ಪರದಾಟ | ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ತಡೆಯದಿದ್ದರೆ ಹೋರಾಟ ರೈತ ಸಂಘ ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲೆಯಾದ್ಯಂತ ರೋಹಿಣಿ ಮಳೆ ಉತ್ತಮ ರೀತಿಯಾಗಿದ್ದು ರೈತ ಬಿತ್ತನೆಯ ಸಿದ್ಧತೆಯಲ್ಲಿದ್ದರೆ ಚಿತ್ತಾಪುರ ತಾಲೂಕಿನಲ್ಲಿ ರಸ ಗೊಬ್ಬರಕ್ಕಾಗಿ ರೈತರು ಅಂಗಡಿ ಅಂಗಡಿ ತಿರುಗಾಡುವ ಸಂಕಟ ಎದುರಿಸುತ್ತಿದ್ದಾನೆ. ಇದಕ್ಕೆಲ್ಲ ಕೃಷಿ ಅಧಿಕಾರಿಗಳ ನಿಷ್ಕಾಳಜಿಯೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ತನ್ನ ಹೊಲದ ಸ್ವಚ್ಛತೆ ಕೆಲಸ ಬಿಟ್ಟು ದಿನಾಲು ತಾಲೂಕು ಕೇಂದ್ರ ಚಿತ್ತಾಪುರಕ್ಕೆ ದಿನಾಲು ಅಲೆದಾಡುವ ಪರಿಸ್ಥಿತಿ ಬಂದಿದೆ. ರಸಗೊಬ್ಬರ ಸಿಕ್ಕರೂ ಕೂಡ ಸರ್ಕಾರ ದರ 1,350 ಮಾರುವ ರಸಗೊಬ್ಬರವನ್ನು 1,600 ರಿಂದ 1,800 ಕೊಟ್ಟು ಖರೀದಿಸುವ ಪರಿಸ್ಥಿತಿಗೆ ಬಂದಿದೆ. ಸಾಲದ ಸುಳಿಯಲ್ಲಿರುವ ರೈತನಿಗೆ ಪೆಟ್ಟು ಮೇಲೆ ಪೆಟ್ಟು ಹಾಕುತ್ತಿದ್ದಾರೆ, ಇದನ್ನೆಲ್ಲ ಗಮನಕ್ಕೂ ಬಂದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮೊನ್ನೆ ಜೆ,ಡಿ, ಅಧಿಕಾರಿಗಳು ಎಲ್ಲ ರೈತರು 1,350 ಕ್ಕಿಂತ ಜಾಸ್ತಿ ದುಡ್ಡು ಕೊಟ್ಟು ರಸಗೊಬ್ಬರವನ್ನು ತೆಗೆದುಕೊಳ್ಳುವುದು ನಮ್ಮ ಗಮನಕ್ಕೆ ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅನ್ನುತ್ತಾರೆ. ಈ ಹೇಳಿಕೆ ಹಾಸ್ಯಾಸ್ಪದವಾಗಿದೆ, ಕಾರಣ ತಾಲೂಕಿನಾದ್ಯಂತ ಎಪ್ಪತ್ತು ಪ್ರತಿಶತ ರೈತರು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ದುಪ್ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಇದನ್ನೆಲ್ಲ ತಮ್ಮ ಗಮನಕ್ಕೂ ಬಂದರೂ ಕೂಡ ಸುಮ್ಮನಿದ್ದು ಊರು ಕಳುವಾದ ಮೇಲೆ ಅಗಸಿ ಬಾಗಿಲು ಬಂದು ಮಾಡಿ ಅನ್ನುವ ಪರಿಸ್ಥಿತಿ ಬಂದಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ರಸ ಗೊಬ್ಬರದ ಪರಿಸ್ಥಿತಿ ಒಂದು ಕಡೆ ಆದರೆ ಬಿತ್ತನೆ ಬೀಜಕ್ಕೂ ಕೂಡ ಅದೇ ರೀತಿ ಕೃಷಿ ಆಫೀಸಿಗೆ ತಿರುಗುವ ಪರಿಸ್ಥಿತಿ ಬಂದಿದೆ. ಇದನ್ನು ಹೀಗೆ ಮುಂದುವರಿಸದೆ ಉತ್ತಮ ಗುಣಮಟ್ಟದ ಹೆಸರು, ಉದ್ದು, ತೊಗರಿ ಬೀಜಗಳು ಆದಷ್ಟು ಬೇಗ ರೈತರಿಗೆ ವಿತರಣೆ ಮಾಡದಿದ್ದರೆ ಕೃಷಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

