ಚಿತ್ತಾಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ | ಬಿಜೆಪಿಯವರು ಆರ್.ಎಸ್.ಎಸ್ ಚಸ್ಮಾ ತೆಗೆದು ಸಂವಿಧಾನ ಎಂಬ ಚಸ್ಮಾ ಹಾಕಲಿ: ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಿಜೆಪಿಯವರು ತಮ್ಮ ಕಣ್ಣಿಗೆ ಹಾಕಿಕೊಂಡ ಆರ್.ಎಸ್.ಎಸ್ ಚಸ್ಮಾ ತೆಗೆದು ಸಂವಿಧಾನ ಎಂಬ ಚಸ್ಮಾ ಹಾಕಿಕೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ತಿರುಗೇಟು ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನಡಿಯಲ್ಲಿ ಎಲ್ಲರೂ ಸಮಾನರು ಯಾವುದೇ ಸಂಘ ಸಂಸ್ಥೆಗಳು ಇರಲಿ ನೋಂದಣಿ ಆಗಲಿ ಎನ್ನುವುದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ ಇದರಲ್ಲಿ ಯಾವುದೇ ತಪ್ಪಿಲ್ಲ, ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅವಿರತ ಶ್ರಮದಿಂದ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆದರೂ ಸುಖಾಸುಮ್ಮನೆ ಆಧಾರರಹಿತ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಲಾಂಗು ಲಗಾಮು ಇಟ್ಟುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದರು.
ಬಾಹರಪೇಟ್ ದ ದಲಿತರ ಏರಿಯಾದಲ್ಲಿ ಮಳೆಗಾಲದ ಸಮಯದಲ್ಲಿ ರುದ್ರಭೂಮಿ ರಸ್ತೆಯಲ್ಲಿ ಮಳೆ ನೀರು ತುಂಬಿ ಅಂತಿಮ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಹೀಗಾಗಿ ಇಲ್ಲೊಂದು ಬ್ರಿಜ್ ನಿರ್ಮಾಣ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಲಾಗಿತ್ತು, ಇದರಿಂದ ಬ್ರಿಜ್ ಮಂಜೂರಾಗಿದೆ, ದಲಿತರ ಏರಿಯಾದ ಅಭಿವೃದ್ಧಿ ಆಗಬಾರದು ಎನ್ನುವ ಮನುಸ್ಮೃತಿ ಬುದ್ಧಿ ಬಿಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಹಣ ನೀಡಿಲ್ಲ ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ನಿಜವಾಗಿಯೂ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ ಎಂದು ಕಿವಿಮಾತು ಹೇಳಿದರು.
ಕಳಪೆ ಎಂದರೆ ಏನು ಅದರ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾಮಗಾರಿ ಇರಲಿ ಅಲ್ಲಿ ಥರ್ಡ್ ಪಾರ್ಟಿ ಇರುತ್ತದೆ. ಯಾವುದರ ಬಗ್ಗೆ ಮಾತನಾಡುವುದಕ್ಕಿಂತ ಮುನ್ನ ಪೂರ್ವ ತಯಾರಿ ಮಾಡಿಕೊಂಡು ಮಾತನಾಡುವುದನ್ನು ಕಲಿಯಿರಿ ಎಂದು ಕಿವಿಮಾತು ಹೇಳಿದರು. ಚಿತ್ತಾವಲಿ ವೃತ್ತ – ಹೊಸ ಕೋರ್ಟ್ ರಸ್ತೆ ಒಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, ಸ್ಟೇಷನ್ ತಾಂಡಾದಲ್ಲಿ ಚೇಂಜ್ ಆಫ್ ವರ್ಕ್ ದಿಂದ ಸಿಸಿ ರಸ್ತೆ ಹಾಗೂ ಸೇವಾಲಾಲ್ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಹೀಗಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು.
ಚಿತ್ತಾಪುರದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರೆ ಎಲ್ಲರಿಗೂ ಗೊತ್ತಿದೆ, ಸರ್ಕಾರಿ ಕನ್ಯಾ ಪ್ರೌಢ ಶಾಲೆ, ದಂಡೋತಿ ಬ್ರಿಜ್ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತೀವೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಸಚಿವ ಪ್ರಿಯಾಂಕ್ ಖರ್ಗೆ ಮಾಡದ ಯಾವುದೇ ಕೆಲಸಗಳಿಲ್ಲ ಈ ನಿಟ್ಟಿನಲ್ಲಿ ಚಿತ್ತಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಸಾಕ್ಷಾತ್ ಪ್ರಿಯಾಂಕ್ ಖರ್ಗೆ ಅವರೇ ಕಣ್ಣಮುಂದೆ ನಿಲ್ಲುತ್ತಾರೆ ಎಂದು ಹೇಳಿದರು.

