ನೂತನ ಎಂಎಲ್ಸಿ ಕಮಕನೂರ ಅವರಿಗೆ ಅದ್ದೂರಿ ಸ್ವಾಗತ | ಚಿತ್ತಾಪುರದಲ್ಲಿ ಎಂಎಲ್ಸಿ ಕಚೇರಿ ಸ್ಥಾಪನೆ: ಕಮಕನೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಧಾನ ಪರಿಷತ್ ಸದಸ್ಯರಿಗೆ ನೋಡಲ್ ತಾಲೂಕುಗಳನ್ನಾಗಿ ಆಯ್ಕೆ ಮಾಡುವಂತೆ ಸರ್ಕಾರ ಸೂಚಿಸಿದ್ದು, ನಾನು ಚಿತ್ತಾಪುರ ಮತಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಶೀಘ್ರದಲ್ಲೇ ಇಲ್ಲಿ ಕಚೇರಿ ಸ್ಥಾಪಿಸಿ ವಾರದಲ್ಲಿ ಎರಡು ಬಾರಿ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ಪಟ್ಟಣದ ಬಸ್ ಡಿಪೋ ಹತ್ತಿರದಿಂದ ಕಮಕನೂರ ಅವರನ್ನು ಕೋಲಿ ಸಮಾಜದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಅಂಬಿಗರ ಚೌಡಯ್ಯ ವೃತ್ತಕ್ಕೆ ಕರೆತರಲಾಯಿತು. ನಂತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನನ್ನಿಂದ ಆಗುವ ಕೆಲಸಗಳು ಮಾಡುತ್ತೇನೆ ಒಂದು ವೇಳೆ ನನ್ನಿಂದ ಆಗದ ಕೆಲಸಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಮಾಡಿಸುತ್ತೇನೆ, ಒಟ್ಟಾರೆ ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಮಾಡುತ್ತೇನೆ ಎಂದರು.
ನಾನು ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದರೂ ಪೂರ್ಣಾವಧಿ ಸಿಕ್ಕಿರಲಿಲ್ಲ ಹೀಗಾಗಿ ಪೂರ್ಣಾವಧಿಗೆ ಆಯ್ಕೆ ಮಾಡಬೇಕು ಎಂದು ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಿದ್ದರಿಂದ ನನ್ನ ಮೇಲೆ ವಿಶ್ವಾಸವಿಟ್ಟು ಮೂರನೇ ಬಾರಿ ಎಂಎಲ್ಸಿ ಮಾಡಿದ್ದರಿಂದ ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿಭಾಯಿಸಿ ಪಕ್ಷಕ್ಕೆ ಹಾಗೂ ಹೈಕಮಾಂಡ್ ಗೆ ದಕ್ಕೆ ಬಾರದಂತೆ ನಿರ್ವಹಿಸುವುದಾಗಿ ಹೇಳಿದರು.
ಅತೃಪ್ತಗೊಂಡ ಭೀಮಣ್ಣ ಸಾಲಿ ಅವರಿಗೂ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಸಿಗುವ ವಿಶ್ವಾಸವಿದೆ, ಈ ಕುರಿತು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಮುಖ್ಯಮಂತ್ರಿ ಡಿಕೆಶಿ ಅವರಿಗೆ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಯುವ ಗೌರವಾಧ್ಯಕ್ಷ ಗುಂಡು ಐನಾಪೂರ, ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ, ಮುಖಂಡರಾದ ಭೀಮಣ್ಣ ಸೀಬಾ, ಜಯಪ್ರಕಾಶ ಕಮಕನೂರ, ಶಿವಮುಂದ್ರಪ್ಪ ಸಣ್ಣೂರಕರ್, ಸಂದೇಶ ಕಮಕನೂರ, ಚಂದ್ರಶೇಖರ ಕಾಶಿ, ಅಣ್ಣಾರಾವ್ ಸಣ್ಣೂರಕರ್, ಈರಪ್ಪ ಭೋವಿ, ಬಸವರಾಜ ಪೂಜಾರಿ, ಸಾಬಣ್ಣ ಡಿಗ್ಗಿ, ಅಭಿಷೇಕ್ ಸಣ್ಣೂರಕರ್, ಸಾಬಣ್ಣ ಭರಾಟೆ, ಈರಣ್ಣ ಕೊಳ್ಳಿ, ಸಿದ್ದು ಸಣ್ಣೂರಕರ್, ಮಲ್ಲಿಕಾರ್ಜುನ ಅಲ್ಲೂರ, ತಿಪ್ಪಣ್ಣ ಇವಣಿ, ಭಾಗಣ್ಣ ಹಲಕರ್ಟಿ, ತಿಮ್ಮಯ್ಯ ರಾಜಾಹುಲಿ, ಸಾಬಣ್ಣ ಹೋಳಿಕಟ್ಟಿ, ಬೆಳ್ಳಪ್ಪ, ಭೀಮಾಶಂಕರ ಹೋಳಿಕಟ್ಟಿ, ಶರಣು ಭಾಗೋಡಿ, ಸಂತೋಷ ಕೊಂಕನಳ್ಳಿ, ರವಿಚಂದ್ರ ದೊಡ್ಡಮನಿ, ದತ್ತಾತ್ರೇಯ ಬುಕ್ಕಾ, ಮಲ್ಲಿಕಾರ್ಜುನ ಮುಗುಳನಾಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿ ಹಾಗೂ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ಕಂಬಳೇಶ್ವರ ಮಠಕ್ಕೆ ಭೇಟಿ ನೀಡಿ ಪೂಜ್ಯ ಸೋಮಶೇಖರ ಶಿವಾಚಾರ್ಯರರಿಂದ ಆಶೀರ್ವಾದ ಪಡೆದುಕೊಂಡರು. ನಂತರ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

