Oplus_131072

ಚಿತ್ತಾಪುರದಲ್ಲಿ 5 ದಿನಗಳ ಉಚಿತ ಯೋಗ ತರಬೇತಿ ಶಿಬಿರಕ್ಕೆ ಯಶಸ್ವಿ ತೆರೆ, ಯೋಗ ಜೀವನದ ಅವಿಭಾಜ್ಯ ಅಂಗ: ಬಡಿಗೇರ್ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಅಂತರರಾಷ್ಟ್ರೀಯ ಯೋಗ ದಿನದ ಸಂಭ್ರಮ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮನೆ ಮಾಡಿತ್ತು. ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪ್ರೌಢಶಾಲೆ ಮತ್ತು ಪತಂಜಲಿ ಯೋಗ ಸಮಿತಿ ಚಿತ್ತಾಪುರ ಜಂಟಿಯಾಗಿ ಆಯೋಜಿಸಿದ್ದ ಐದು ದಿನಗಳ ಉಚಿತ ಯೋಗ ಪ್ರಶಿಕ್ಷಣ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ಮೂಲಕ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪತಂಜಲಿ ಯೋಗ ಸಮಿತಿಯ ತಾಲೂಕು ಅಧ್ಯಕ್ಷ, ಯೋಗ ಸಾಧಕ ವೀರಣ್ಣ ಶಿಲ್ಪಿ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು. ತಾಲೂಕು ಮಹಿಳಾ ಪ್ರಧಾನಿ ಸುವರ್ಣ ಶಿಲ್ಪಿ ಸೇರಿದಂತೆ ಶಿಕ್ಷಣ ಸಂಸ್ಥೆಯ ಸದಸ್ಯರಾದ ರಾಜಶೇಖರ ಬಳ್ಳಾ, ಪ್ರಹ್ಲಾದ ವಿಶ್ವಕರ್ಮ, ಮನೋಹರ ಹಡಪದ, ರಮೇಶ ಭಕ್ತಿ ಮತ್ತು ನೂರಾರು ಯೋಗಾಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಸಾಮೂಹಿಕ ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಯೋಗ ಪ್ರದರ್ಶನದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಯೋಗ ಸಾಧಕ ಹಾಗೂ ಶಿಕ್ಷಕ ಜಗನ್ನಾಥ್ ಬಡಿಗೇರ್ ಮಾತನಾಡಿ, ಯೋಗವು ಕೇವಲ ಒಂದು ದಿನದ ಆಚರಣೆಯಾಗಬಾರದು, ಅದು ನಮ್ಮ ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ವಿದ್ಯಾರ್ಥಿಗಳಿಗೆ ಜಂಕ್ ಆಹಾರ ಕಡಿಮೆ ಮಾಡಿ ಪೌಷ್ಟಿಕ ಆಹಾರ ಸೇವಿಸುವಂತೆ ಸಲಹೆ ನೀಡಿದರು. ಯೋಗ ಮತ್ತು ಧ್ಯಾನದಿಂದ ದೇಹ ಸದೃಢವಾಗಿ, ಮನಸ್ಸು ಶುದ್ಧವಾಗುತ್ತದೆ. ಇದರಿಂದ ಉತ್ತಮ ಶಿಕ್ಷಣ ಪಡೆದು ಸ್ವಸ್ಥ ಸಮಾಜ ನಿರ್ಮಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಪತಂಜಲಿ ಯೋಗ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಕ್ಕಮಹಾದೇವಿ ದೇಸಾಯಿ ಯೋಗ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಾದ ಪ್ರಸಾದ್ ಮತ್ತು ಭೂಮಿಕಾ ತಮ್ಮ ಯೋಗಾಭ್ಯಾಸದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಪೆಂದು ಮಾತನಾಡಿ, ನಮ್ಮ ಶಾಲೆಯಲ್ಲಿ ಯೋಗ ದಿನಾಚರಣೆ ಆಯೋಜಿಸಿದ್ದು ಸಂತೋಷ ತಂದಿದೆ ಎಂದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಾಲೆಯ ಮುಖ್ಯ ಗುರುಗಳು, ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗೆ ಅವರು ಹೃತ್ಪೂರ್ವಕ ವಂದನೆ ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರು ರಮೇಶ್ ಯಾದವಾಡ್, ದೇವಿಂದ್ರಪ್ಪ ಸಜ್ಜನಶೆಟ್ಟಿ, ರೇಖಾ ತಳವಾರ, ಮುನಿಯಪ್ಪ ಕಡಬೂರ, ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಶಾಂಕ್ ಆರ್ ಮತ್ತು ವಿನಯ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಪತ್ ಸ್ವಾಗತ ಭಾಷಣ ಮಾಡಿದರು, ನಾಗೇಶ್ ವಂದನಾರ್ಪಣೆ ಮಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!