ಚಿತ್ತಾಪುರದಲ್ಲಿ ವಿಶೇಷ ಜನಜಾಗೃತಿ ಅಭಿಯಾನ | ವಿಬಿಜಿ ರಾಮಜಿ ಯೋಜನೆಯು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿದೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಗ್ರಾಮೀಣ ಭಾಗದ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ‘ವಿಬಿಜಿ ರಾಮಜಿ’ (VB-G RAM G) ಯೋಜನೆಯು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿದೆ ಎಂದು ಅಭಿಯಾನದ ಮಂಡಲ ಸಂಯೋಜಕ ರಾಜಶೇಖರ ನಾಗಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾದ ವಿಶೇಷ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಜನೆಯ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಈ ನೂತನ ಕಾಯ್ದೆಯಡಿ ವಾರ್ಷಿಕ ಉದ್ಯೋಗದ ಮಿತಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ಕಾರ್ಮಿಕರಿಗೆ ದೊಡ್ಡ ಆಸರೆಯಾಗಲಿದೆ. ಅಷ್ಟೇ ಅಲ್ಲದೆ, ಕೃಷಿ ಹಂಗಾಮಿನ ಸಮಯದಲ್ಲಿ ರೈತರಿಗೆ ಕಾರ್ಮಿಕರ ಕೊರತೆಯಾಗದಂತೆ ‘ಕೃಷಿ ಬಿಡುವು’ ನೀಡುವ ವಿಶೇಷ ಸೌಲಭ್ಯವನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ನೇರ ನಗದು ವರ್ಗಾವಣೆಯ (DBT) ಮೂಲಕ ಮಧ್ಯವರ್ತಿಗಳ ಹಾವಳಿಗೆ ಈ ಕಾಯ್ದೆ ಸಂಪೂರ್ಣವಾಗಿ ಬ್ರೇಕ್ ಹಾಕಿದೆ ಎಂದು ವಿವರಿಸಿದರು.
ಕ್ಷೇತ್ರದ ಅಭಿಯಾನ ಉಸ್ತುವಾರಿ ಶಶಿಕಲಾ ಟೆಂಗಳಿ ಮತ್ತು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಈ ಐತಿಹಾಸಿಕ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಯು ಪಡೆದುಕೊಳ್ಳಬೇಕು. ಹಳ್ಳಿಗಳ ಆರ್ಥಿಕ ಸ್ಥಿತಿ ಸುಧಾರಿಸಲು ಈ ಯೋಜನೆ ಸಂಜೀವಿನಿಯಿದ್ದಂತೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೇನೂರ್, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಮಲ್ಲಿನಾಥ ಇಂದೂರ, ಸುರೇಶ್ ರಾಠೋಡ್, ಚಂದ್ರಶೇಖರ ಅವಂಟಿ, ಶರಣಗೌಡ ಭೀಮನಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ನಾಗೂಬಾಯಿ ಜಿತೂರೆ ಸೇರಿದಂತೆ ಮಂಡಲದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಶರಣು ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿಗಳಾದ ನಾಗರಾಜ ಹೂಗಾರ್ ಮತ್ತು ಮಲ್ಲಿಕಾರ್ಜುನ್ ಇಟಗಿ ಕಾರ್ಯಕ್ರಮ ನಿರೂಪಿಸಿದರು, ವಾಡಿ ನಗರ ಘಟಕದ ಅಧ್ಯಕ್ಷ ವೀರಣ್ಣ ಯಾರಿ ವಂದಿಸಿದರು.

