ಕಲಬುರಗಿ ವಿವಿ ಖಾಲಿ ಬೋಧಕ ಹುದ್ದೆಗಳ ಭರ್ತಿಗೆ ಎಂಎಲ್ಸಿ ತಳವಾರ ಸಾಬಣ್ಣ ಆಗ್ರಹ
ನಾಗಾವಿ ಎಕ್ಸಪ್ರೆಸ್
ಬೆಳಗಾವಿ: ರಾಯಚೂರು ವಿವಿಗೆ ಮಾತೃ ವಿವಿ ಆಗಿರುವ ಕಲಬುರಗಿ ವಿವಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣ ಆಗ್ರಹಿಸಿದರು.
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ಕುರಿತ ವಿಧೇಯಕದ ಚರ್ಚೆಯಲ್ಲಿ ಮಾತನಾಡಿದ ಅವರು, ಕಲಬುರಗಿ ವಿವಿಯಲ್ಲಿ ಮಂಜೂರಾದ 260 ಬೋಧಕ ಹುದ್ದೆಗಳ ಪೈಕಿ ಕೇವಲ 32 ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ. ಬೋಧಕರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಆದ್ದರಿಂದ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದರು.
ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ನಾಮಕಾರಣ ಸ್ವಾಗತಾರ್ಹ. ಅದೇ ರೀತಿ ರಾಜ್ಯದಲ್ಲಿ ಹಲವು ಹೊಸ ವಿವಿಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೆಲವು ವಿವಿಗಳಿಗೆ ಕನಕದಾಸ, ನಾರಾಯಣಗುರು, ಅಂಬಿಗರ ಚೌಡಯ್ಯ ಹೆಸರು ಇಡಬೇಕು ಎಂದು ಮನವಿ ಮಾಡಿದರು.
ರಾಯಚೂರು ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಬಿಜೆಪಿಯ ಕೇಶವ ಪ್ರಸಾದ್ ಮನವಿ ಮಾಡಿದರು. ಹೆಸರಿಟ್ಟಿರುವುದು ಒಳ್ಳೆಯದು. ಆದರೆ, ವಿವಿಗೆ ಅಗತ್ಯ ಅನುದಾನ ಒದಗಿ ಸಬೇಕು ಎಂದು ಹೇಮಲತಾ ನಾಯ್ ಕೋರಿದರು. ಚರ್ಚೆ ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ದೊರಕಿತು.