ಕಾಳಗಿ: ವಿವಿಧಡೆ ಜಿಲ್ಲಾಧಿಕಾರಿ ಭೇಟಿ ಪರೀಶಿಲನೆ
ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿ ಖಡಕ್ ಅದೇಶ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ : ತಾಲೂಕಿನ ವಿವಿಧೆಡೆ ಬುಧವಾರ ಆಕಸ್ಮಿಕವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಅದೇಶ ಮಾಡಿದರು.
ತಾಲೂಕಿನ ಕೋಡ್ಲಿ ಕ್ರಾಸ್,ನಲ್ಲಿ ಸುಮಾರು ಮೂರು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರನಿಗೆ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿ ಇಲ್ಲದಿದ್ದರೆ ಟೆಂಡರ್ ರದ್ದು ಮಾಡಿ ರೀಟೆಂಡರ್ ಕರೆದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಆದೇಶ ಮಾಡಿದರು.
ನಂತರ ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಸ್ವಚ್ಚತೆ ವಾತಾವರಣ ಕಂಡು ಸಿಡಿಮಿಡಿಕೊಂಡರು. ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಿವಂತೆ ತಾಕೀತು ಮಾಡಿದರು.
ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ ಸರ್ಕಾರದಿಂದ ಬರುವುದನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ನೀಡುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು. ಈ ವೇಳೆ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಯಾವುದೇ ತೊಂದರೆ ಇದ್ದರೆ ಕರೆ ಮಾಡುವಂತೆ ಮೊಬೈಲ್ ಸಂಖ್ಯೆ ನೀಡಿ, ಉತ್ತಮ ಅಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.
ಪಟ್ಟಣ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ವೀಕ್ಷಣೆ ಮಾಡಿದರು. ನಂತರ ಸಿಬ್ಬಂಧಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರಿಗೆ ವಿನಾಃ ಕಾರಣ ಅಲೆದಾಡಿಸಬೇಡಿ, ಉತ್ತಮ ಸೇವೆ ನೀಡಿ ಎಂದು ಸೂಚಿಸಿ, ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ವಿವಿಧ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ, ತಹಶೀಲ್ದಾರ ಘಮಾವತಿ ರಾಠೋಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸವಲಿಂಗಪ್ಪ ಡಿಗ್ಗಿ, ಪಪಂ ಮುಖ್ಯಾಧಿಕಾರಿ ಪಂಕಜಾ ಆಂಜನೇಯ, ಪಿಡ್ಬ್ಲೂಡಿ ಎಇಇ ಮಲ್ಲಿಕಾರ್ಜುನ ದಂಡಿನ, ಸಹಾಯಕ ಅಭಿಯಂತರ ರಾಹುಲ್ ಕಾಶಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.